ಬೆಂಗಳೂರು, ಸೆ. ೧: ರಾಜ್ಯದಲ್ಲಿ ಅರಣ್ಯ ಇಲಾಖೆಯು ಒತ್ತುವರಿ ಆಗಿರುವ ಅರಣ್ಯ ಭೂಮಿಯ ತೆರವು ಕಾರ್ಯಾಚರಣೆ ಚುರುಕುಗೊಳಿಸಿರುವ ಬೆನ್ನಲ್ಲೇ ಸೆಪ್ಟೆಂಬರ್ ೨ (ಇಂದಿನಿAದ ) ರಾಜ್ಯ ಕಂದಾಯ ಇಲಾಖೆಯೂ ಭಾರೀ ಪ್ರಮಾಣದಲ್ಲಿ ಒತ್ತುವರಿ ಆಗಿರುವ ತನ್ನ ಭೂಮಿಯನ್ನು ಹಿಂಪಡೆಯಲು ಕಾರ್ಯಾಚರಣೆ ಆರಂಬಿಸಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು ೧೩.೧೭ ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿಯಾಗಿರುವುದು ನಿಖರ ಸರ್ವೇಯಲ್ಲಿ ಧೃಢಪಟ್ಟಿದೆ. ಗೂಗಲ್ ಮ್ಯಾಪ್ ಸಹಾಯದಿಂದ ಸರ್ವೇ ಇಲಾಖೆಯ ಲ್ಯಾಂಡ್ ಬೀಟ್ ಮತ್ತು ದಿಶಾಂಕ್ ಆಪ್ ನಲ್ಲಿ ಒತ್ತುವರಿ ಆಗಿರುವ ಎಲ್ಲಾ ಭೂಮಿಗಳ ಮಾಹಿತಿ ಇಲಾಖೆ ಬಳಿ ಇದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಒತ್ತುವರಿ ತೆರವಿಗೆ ಕಾರ್ಯಾಚರಣೆ ಚುರುಕುಗೊಳಿಸಿ ಪ್ರತಿಯೊಬ್ಬರಿಗೂ ಜವಾಬ್ದಾರಿ ನಿಗದಿಪಡಿಸಿದ್ದಾರೆ.
ರಾಜ್ಯಾದ್ಯಂತ ಒಟ್ಟು ೨೩೯ ತಹಶೀಲ್ದಾರ್ಗಳಿದ್ದು, ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ತಿಂಗಳಿಗೆ ೧೦ರಿಂದ ೨೦ ಒತ್ತುವರಿ ಪ್ರಕರಣಗಳಲ್ಲಿ ತೆರವು ಕಾರ್ಯ ಕೈಗೊಳ್ಳಬೇಕು. ಆಯಾ ಜಿಲ್ಲಾಧಿಕಾರಿಗಳು ವಾರಾಂತ್ಯದಲ್ಲಿ ಪ್ರಗತಿ ಪರಿಶೀಲಿಸಿ ವಿವರವನ್ನು ಕಂದಾಯ ಆಯುಕ್ತಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಆ ಮೂಲಕ ವಾರ, ಮಾಸಿಕವಾರು ಪ್ರಗತಿ ಪರಿಶೀಲನೆ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತವಾಗಿ ನಡೆಸಿ ಕಂದಾಯ ಭೂಮಿಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಗೆ ಶುರುವಾಗಿದೆ.
ಕೆರೆ, ಸ್ಮಶಾನ ಭೂಮಿ ಒತ್ತುವರಿಯನ್ನು ಆದ್ಯತೆ ಮೇರೆಗೆ ತೆರವುಗೊಳಿಸಬೇಕು. ಕಂದಾಯ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ವಾಣಿಜ್ಯ ಕಟ್ಟಡ, ಇತರೆ ರೀತಿಯಲ್ಲಿ ಲಾಭದಾಯಕ ಉದ್ದೇಶಕ್ಕೆ ಅಭಿವೃದ್ಧಿಪಡಿಸಿದ್ದರೆ ಅವುಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಕೃಷಿ ಭೂಮಿಯಾಗಿದ್ದರೆ, ಬೆಳೆ ಬೆಳೆದಿದ್ದರೆ, ಕೃಷಿ ಚಟುವಟಿಕೆ ನಡೆದಿರುವ ಭೂಮಿಯ ಒತ್ತುವರಿ ಕೊನೆಯ ಹಂತದಲ್ಲಿ ಪರಿಶೀಲಿಸಿ ನಿಯಮಾನುಸಾರ ತೆರವುಗೊಳಿಸಲು ಇಲಾಖೆ ನಿರ್ಧರಿಸಿದೆ.
ರಾಜ್ಯಾದ್ಯಂತ ಸುಮಾರು ೨೬ ಲಕ್ಷ ಎಕರೆ ಕಂದಾಯ ಭೂಮಿ ಇದ್ದು ಇದರಲ್ಲಿ ಸುಮಾರು ೧೩.೧೭ ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆ ಗುರುತಿಸಿದೆ. ಇದರಲ್ಲಿ ನಮೂನೆ- ೫೦, ೫೩, ೫೭ರ ಸಲ್ಲಿಕೆಯಾಗಿ ಬಗರ್ ಹುಕುಂ ಸಮಿತಿಯಲ್ಲಿ ಬಾಕಿ ಇರುವ ಪ್ರಕರಣಗಳ ಭೂಮಿಯೂ ಸೇರಿದೆ. ಒತ್ತುವರಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿಯೇ ಸರ್ವೆಯನ್ನೂ ನಡೆಸಲೂ ಆದೇಶ ನೀಡಲಾಗಿದೆ. ಆಯಾ ತಾಲೂಕುಗಳ ಭೂದಾಖಲೆಗಳ ಸಹಾಯಕ ನಿರ್ದೇಶಕರು (ಎಡಿಎಲ್ಆರ್) ಸರ್ವೆ ಮಾಡಿಕೊಡುತ್ತಾರೆ. ಆಗಲೇ ತಹಶೀಲ್ದಾರ್ಗಳು ಒತ್ತುವರಿ ತೆರವುಗೊಳಿಸುವ ಜತೆಗೆ ‘ಜಿಯೋಫೆನ್ಸಿಂಗ್'ನಡಿ ಸರ್ಕಾರೀ ಭೂಮಿಗಳ ಗಡಿಗಳನ್ನು ಕಂಪ್ಯೂಟರ್ ನಲ್ಲಿ ದಾಖಲಿಸುವ ಕಾರ್ಯ ಕೈಗೊಳ್ಳಲಿದ್ದಾರೆ.
ತಹಶೀಲ್ದಾರ್ಗಳು ಒತ್ತುವರಿ ತೆರವುಗೊಳಿಸುವಲ್ಲಿ ನಿರ್ಲಕ್ಷö್ಯ ತೋರಿದರೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡುವಂತೆ ಸೂಚಿಸಲಾಗಿದೆ. ದೈನಂದಿನ ಕಾರ್ಯಾಚರಣೆಯ ಕಂದಾಯ ಭೂಮಿ ಒತ್ತುವರಿ ತೆರವು ಕಾರ್ಯ ಪ್ರಗತಿಯ ನಿರಂತರ ಮೇಲ್ವಿಚಾರಣೆಗೆ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಡ್ಯಾಶ್ಬೋರ್ಡ್ ಸ್ಥಾಪಿಸಲಾಗಿದೆ. ಇಲ್ಲಿ ಮಾಹಿತಿ ನಿತ್ಯವೂ ಅಪ್ ಡೇಟ್ ಆಗುತ್ತಿದ್ದು ಪ್ರಗತಿಯನ್ನು ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ.
ರೈತರು ಸಾಗುವಳಿ ಮಾಡುತ್ತಿರುವ ಭೂಮಿ ಹೊರತುಪಡಿಸಿ ಉಳಿದ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದ್ದು ಕೆರೆ-ಕುಂಟೆ, ಸ್ಮಶಾನ, ಗುಂಡು ತೋಪು, ರಸ್ತೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ.