*ಗೋಣಿಕೊಪ್ಪ, ಸೆ. ೧: ಜನಪರ ನಿಲುವುಗಳಿಂದ ಹಿಂದುಳಿದು ಕಾಂಗ್ರೆಸ್ ಸರ್ಕಾರ ಜನವಿರೋಧಿ ಆಡಳಿತವನ್ನು ನಡೆಸುತ್ತಿದೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಕಿಡಿಕಾರಿದರು.

ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಧೀರ್ಘವಾಗಿ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು. ಭ್ರಷ್ಟಾಚಾರವನ್ನು ಹೆಗಲಿನಲ್ಲಿ ಹೊತ್ತುಕೊಂಡು ಸರ್ಕಾರ ತೆವಳುತ್ತಾ ಸಾಗುತ್ತಿದೆ. ಈ ಭಾರವನ್ನು ಹೊತ್ತುಕೊಳ್ಳಲಾಗದೆ ಕೆಲವೇ ದಿನಗಳಲ್ಲಿ ಉರುಳಿಬೀಳುವ ಸಂಭವವೇ ಹೆಚ್ಚಿದೆ ಎಂದರು.

ಉಚಿತ ಯೋಜನೆಗಳ ಮೂಲಕ ಶೂನ್ಯ ಪ್ರಗತಿಯನ್ನು ಸರ್ಕಾರ ಕಾಣುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಸರ್ಕಾರ ಕಳೆದುಕೊಂಡಿದೆ. ಬಿಜೆಪಿಯವರು ದೇಶಕಟ್ಟಲು ಹೊರಟಿದ್ದೇವೆ. ಈ ಮೂಲಕ ಚಿಂತಿಸಿ ದೇಶವನ್ನು ಆರ್ಥಿಕ ಸ್ಥಿತಿಯ ಜೊತೆಗೆ ಪ್ರಗತಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ. ರಾಜ್ಯ ಸರ್ಕಾರ ಇಂತಹ ಜನಪರ ಚಟುವಟಿಕೆಗಳಿಗೆ ಸ್ಪಂದಿಸದೆ, ಈ ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟ ಅನುದಾನಗಳನ್ನೇ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯ ಎಂದು ಬೊಗಳೆಬಿಡುತ್ತಿದೆ ಎಂದು ಆರೋಪಿಸಿದರು.

ಕೊಡಗು ಜಿಲ್ಲೆಯಾಲ್ಲಂತೂ ಯಾವುದೇ ಪ್ರಗತಿ ಚಟುವಟಿಕೆ ಕಾಣಿಸುತ್ತಿಲ್ಲ. ಬದಲಾಗಿ ಹಳ್ಳಿಗೊಂದು ಇಸ್ಪೇಟ್ ಕ್ಲಬ್‌ಗಳು, ಮರಳು ದಂಧೆ, ಮರದಂಧೆ, ಅಕ್ರಮ ಜಾನುವಾರು ಸಾಗಾಟ, ಚೆತ್‌ಕಲ್ ದಂಧೆ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳು ಪುಷ್ಟಿಗೊಂಡಿದೆ. ೨೫೦ ಕೋಟಿ ಅನುದಾನ ತಂದಿದ್ದೇವೆ ಎಂದು ಶಾಸಕರು ಸುಳ್ಳು ಹೇಳುತ್ತಾ ಜನರ ಹಾದಿಯನ್ನು ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಯಾವ ಸಾಧನೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಜಮ್ಮಾ ಸಮಸ್ಯೆಯ ಬಗ್ಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಆದರೂ, ಅದನ್ನು ಸುಳ್ಳು ಎಂದು ಬಿಂಬಿಸುತ್ತಿದ್ದಾರೆ. ಪಾರಂಪರಿಕವಾಗಿ ಮನೆಗಳಲ್ಲಿ ವನ್ಯಪ್ರಾಣಿಗಳ ಕೊಂಬು ಮತ್ತು ಚರ್ಮಗಳ ಬಳಕೆ ಮಾಡಲಾಗುತ್ತಿತ್ತು. ಈ ಬಗ್ಗೆ ೧೯೭೨ ರಲ್ಲಿ ಸರ್ಕಾರ ಸ್ಪಷ್ಟತೆಯನ್ನು ಕೇಳಿ ಪರಿಹಾರ ನೀಡಿದೆ. ಅದನ್ನು ಮುನ್ನಲೆಗೆ ತರುವ ರಾಜಕೀಯ ಪ್ರಯತ್ನ ನಡೆಸಿ ಜನ ವಿರೋಧಿಸುತ್ತಿದ್ದಂತೆ ಅದನ್ನು ತಡೆಹಿಡಿಯುವ ತಂತ್ರಗಾರಿಕೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ.

ಮರ ಕಡಿಯುವ ಹಕ್ಕಿನ ಬಗ್ಗೆಯೂ ಇದೇ ರೀತಿಯ ಅಪಪ್ರಚಾರ ಮಾಡುತ್ತಾ ಜಿಲ್ಲೆಯ ರಾಜಕೀಯ ಸುಸ್ಥಿತಿಯನ್ನು ಕದಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳ್ಳದಂತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಲಾಗಿದೆ. ಅದನ್ನು ಮತ್ತೆ ಮುನ್ನಲೆಗೆ ತರುವ ಪ್ರಯತ್ನಕ್ಕೆ ಕಾಂಗ್ರೆಸ್ ತಂತ್ರ ಹೆಣೆದು ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಹೇಳಿದರು. ಆನೆ - ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಜೆಪಿ ಸರ್ಕಾರ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಬಜೆಟ್‌ನಲ್ಲಿ ೧೮೭ ಕೋಟಿಯನ್ನು ಮೀಸಲಿರಿಸಿ, ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ಆದರೆ, ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ರೈಲ್ವೇ ಬ್ಯಾರಿಕೇಡ್‌ಗಳನ್ನು ಅಳವಡಿಸಲು ೧೨೦ ಕೋಟಿಯನ್ನ ಬಜೆಟ್‌ನಲ್ಲಿ ಮೀಸಲಿಟ್ಟರೂ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದ ಬಹು ಕೋಟಿ ಹಗರಣದಂತೆ ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಮೀಸಲಿಟ್ಟ ಕೋಟಿ ರೂಪಾಯಿಗಳು ಕಳ್ಳತನವಾಗುವ ಸಮಯ ದೂರ ಉಳಿದಿಲ್ಲ. ಈ ಬಗ್ಗೆ ಶೀಘ್ರವಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಮಾತನಾಡಿ, ೧೪ ತಿಂಗಳು ಪೂರೈಸಿದ ರಾಜ್ಯ ಸರ್ಕಾರದ ಆಡಳಿತದಲ್ಲಿ ಜನಪರತೆ ಕಾಣುತ್ತಿಲ್ಲ. ಪ್ರತಿಯೊಂದು ವಸ್ತುಗಳ ತೆರಿಗೆ ಹೆಚ್ಚಿಸಿ ಜನ ವಿರೋಧಿ ಆಡಳಿತವನ್ನು ನಡೆಸುತ್ತಿದೆ. ಅಭಿವೃದ್ಧಿ ಎಂಬದು ಕಾಣದ ಮರೀಚಿಕೆಯಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬಳಲುತ್ತಿದೆ ಎಂದು ದೂರಿದರು.

ಇಂತಹ ಸರ್ಕಾರವನ್ನು ನಂಬಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಂಕಷ್ಟಕ್ಕೆ ಒಳಗಾಗಬಹುದು ಎಂಬುದನ್ನು ಅರಿತು ಸರಕಾರದ ಭ್ರಷ್ಟತೆಯ ವಿರುದ್ಧ ಹೋರಾಟದ ಮನೋಭಾವವನ್ನು ವ್ಯಕ್ತಪಡಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಭಾರತೀಯ ಜನತಾ ಪಾರ್ಟಿ ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಮಾತನಾಡಿ, ಸದಸ್ಯತ್ವ ಅಭಿಯಾನ ಗುರಿಯನ್ನು ಶೀಘ್ರವಾಗಿ ತಲುಪಬೇಕಾಗಿದೆ. ದೇಶದಲ್ಲಿ ೨೩ ಕೋಟಿ ಸದಸ್ಯತ್ವ ಅಭಿಯಾನದ ಗುರಿಯನ್ನು ಹೊಂದಿದ್ದು, ಕಳೆದ ಬಾರಿ ಜಿಲ್ಲೆಯಲ್ಲಿ ೫೮೦೦೦ ಸದಸ್ಯತ್ವ ಮುನ್ನಡೆಸಲಾಗಿದೆ. ಈ ಬಾರಿ ಅದನ್ನು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೋಂದಾಯಿಸುವ ಮೂಲಕ ಗುರಿಯನ್ನು ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಬಿಜೆಪಿ ಸದೃಢವಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮತ್ತು ಎಂ.ಎA ರವೀಂದ್ರ, ಮಾತನಾಡಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಫಲವಾಗಿ ಬಿಜೆಪಿ ಜನ ಪರವಾಗಿ ಸರ್ಕಾರ ನಡೆಸಲು ಸಾಧ್ಯವಾಗಿದೆ. ಈ ಪ್ರಯತ್ನ ಮುಂದುವರಿದ ಭಾಗವಾಗಿ ಹೋರಾಟವನ್ನು ನಡೆಸಬೇಕಾಗಿದೆ. ಸರ್ಕಾರದ ಜನವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸುವ ಎದೆಗಾರಿಕೆ ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಹುಟ್ಟಿಕೊಳ್ಳಬೇಕು ಎಂದು ಹುರಿದುಂಬಿಸಿದರು.

ತಾಲೂಕು ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಕಾರ್ಯದರ್ಶಿ ಗುಮ್ಮಟ್ಟಿರ ಕಿಲನ್ ಗಣಪತಿ, ಉಪಾಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ, ತಾಲೂಕು ಮಂಡಲ ಕಾರ್ಯದರ್ಶಿ ಮುದ್ದಿಯಡ ಮಂಜುಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ತಾಲೂಕು ಮಂಡಲ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಜಿಲ್ಲಾ, ತಾಲೂಕು ಸಮಿತಿ ಪದಾಧಿಕಾರಿಗಳು, ಬೂತ್ ಸಮಿತಿಯ ಅಧ್ಯಕ್ಷರುಗಳು, ಕಾರ್ಯಕರ್ತರುಗಳು ಹಾಜರಿದ್ದರು. -ಎನ್.ಎನ್ ದಿನೇಶ್