ಮಡಿಕೇರಿ, ಸೆ. ೨: ಕಾಡಾನೆ ದಾಳಿ ನಡೆಸಿ ಕೃಷಿ ಫಸಲು ನಾಶಗೊಳಿಸಿರುವ ಘಟನೆ ತಿತಿಮತಿ ಸಮೀಪದ ನೊಖ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚೆಪ್ಪುಡೀರ ಕಾರ್ಯಪ್ಪ ಅವರ ತೋಟದಲ್ಲಿ ೧೦೦ ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಬುಡ ಸಮೇತ ಕಿತ್ತು ಎಸೆದು ಕಾಡಾನೆಗಳು ಅಟ್ಟಹಾಸ ತೋರಿವೆ. ತಿತಿಮತಿಯಿಂದ ಜಂಗಲಾಡಿವರೆಗೆ ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ರೈಲ್ವೆ ಬ್ಯಾರಿಕೇಡ್ ಕಳಪೆ ಕಾಮಗಾರಿಯಿಂದ ಕೂಡಿದ ಪರಿಣಾಮ ಕಾಡಾನೆಗಳು ಸಲೀಸಾಗಿ ತೋಟಗಳಿಗೆ ನುಸುಳಿ ಫಸಲು ನಾಶಪಡಿಸುತ್ತಿವೆ. ಕಾಡಾನೆಗಳ ದಾಳಿಯಿಂದಲೇ ಮುರಿದು ಹೋದ ರೈಲ್ವೆ ಬ್ಯಾರಿಕೇಡ್‌ಗಳನ್ನು ಮರದ ದಿಮ್ಮಿಯಿಂದ ಮುಚ್ಚಲಾಗಿದ್ದು, ಇದರಿಂದ ಕಾಡಾನೆಗಳ ಅಟ್ಟಹಾಸವನ್ನು ತಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಕಾರ್ಯಪ್ಪ, ಅರಣ್ಯ ಇಲಾಖೆ ಕಾಡಾನೆ ತಡೆಗೆ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.