ಕಣಿವೆ, ಸೆ. ೧ : ಕುಶಾಲನಗರ ತಾಲೂಕಿನ ಹೆರೂರು, ನಾಕೂರು ಶಿರಂಗಾಲ ಹಾಗೂ ಕಲ್ಲೂರು ಭಾಗಗಳಲ್ಲಿ ಕೃಷಿಕರಿಗೆ ಭೀತಿ ಮೂಡಿಸಿರುವ ಒಂಟಿ ಸಲಗ ಇಂದು ಸಂಜೆ ೬ ಗಂಟೆಯ ಸುಮಾರಿಗೆ ಹೆರೂರು ಅರಣ್ಯದೊಳಗಿಂದ ರಸ್ತೆಗೆ ದಿಢೀರನೆ ಆಗಮಿಸಿ ತನ್ನೆದುರು ಕಂಡ ಹೆರೂರು ಚೆಕ್ ಪೋಸ್ಟಿನಲ್ಲಿನ ನಾಮಫಲಕವನ್ನು ಕ್ಷಣಾರ್ಧದಲ್ಲಿ ಕಿತ್ತೆಸೆದ ಘಟನೆ ನಡೆಯಿತು. ಭಾನುವಾರ ರಜಾ ದಿನವಾದ್ದರಿಂದ ಹೆಚ್ಚು ಪ್ರವಾಸಿಗರು ಇದೇ ರಸ್ತೆಯಲ್ಲಿ ಸಾಗಿ ಹಾರಂಗಿ ಹಿನ್ನೀರು ಪ್ರದೇಶದ ಸೊಬಗು ಸವಿಯುವ ಕಾರಣ ಯಾವುದಾದರೂ ಪ್ರವಾಸಿಗರ ವಾಹನ ಈ ಸಲಗಕ್ಕೆ ಎದುರಾಗಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿ ಹೆರೂರಿನ ಕೃಷಿಕ ಅರುಣ್ ಕುಮಾರ್ ‘ಶಕ್ತಿ’ಗೆ ವಿವರಿಸಿದರು.

ಭಾರೀ ಗಾತ್ರ ಹಾಗೂ ಎತ್ತರವಿರುವ ಈ ಒಂಟಿ ಸಲಗ ನಮ್ಮ ಕೃಷಿ ಫಸಲನ್ನು ತಿಂದು ತುಳಿದು ನಿತ್ಯವೂ ಹಾನಿಪಡಿಸುತ್ತಿದೆ. ಗ್ರಾಮಸ್ಥರಿಗೂ ಇದರಿಂದಾಗಿ ತೀವ್ರ ಆತಂಕ ಸೃಷ್ಟಿಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ನಾವು ಬೆಳೆದಿದ್ದ ಮರಗೆಣಸು ಫಸಲನ್ನು ಕಿತ್ತು ತಿಂದು ಲಕ್ಷಾಂತರ ರೂ.ಗಳ ನಷ್ಟವಾಗಿತ್ತು. ಕಳೆದ ಆಗಸ್ಟ್ ಮೊದಲ ವಾರದಲ್ಲಿ ಫಸಲು ಭರಿತ ನೂರಾರು ಅಡಿಕೆ ಗಿಡಗಳನ್ನು ಕೆಡವಿ ಹಾನಿ ಮಾಡಿತ್ತು ಎಂದು ಚಂದ್ರಶೇಖರ್ ವಿವರಿಸಿದರು.

ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಈ ಸಲಗವನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿದರೆ ಇಲ್ಲಿನ ರೈತರಿಗೆ ಒಂದಷ್ಟು ನೆಮ್ಮದಿ ಸಿಕ್ಕಂತಾಗುತ್ತದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ. -ಕೆ.ಎಸ್. ಮೂರ್ತಿ