ವೀರಾಜಪೇಟೆ, ಸೆ. ೨: ಕೊಡಗು ಜಿಲ್ಲಾ ಪದವಿ ಪೂರ್ವ ಅನುದಾನಿತ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.

ಪದವಿಪೂರ್ವ ಅನುದಾನಿತ ಕಾಲೇಜುಗಳಲ್ಲಿ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಕನಿಷ್ಟ ೪೦ಕ್ಕೆ ನಿಗದಿಪಡಿಸಿದ್ದು, ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯನ್ನು ೪೦ ರಿಂದ ೨೦ ಕ್ಕೆ ಇಳಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಉಪನ್ಯಾಸಕರ ವೇತನವನ್ನು ತಡೆಹಿಡಿಯಬಾರದು. ಪ್ರಜಾ ಪ್ರತಿನಿಧಿ ಕಾಯ್ದೆಯ ತಿದ್ದುಪಡಿ ಅನ್ವಯ ಮಲೆನಾಡು ಜಿಲ್ಲೆಗಳಿಗೆ ರಿಯಾಯಿತಿಯನ್ನು ನೀಡಲಾಗಿದೆ. ಆದ್ದರಿಂದ ಕೊಡಗು ಸೇರಿದಂತೆ ಇತರ ಮಲೆನಾಡಿನ ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಬೇಕು. ಕಾರ್ಯಭಾರವಿಲ್ಲದ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜನೆ ಮಾಡುವುದಾದಲ್ಲಿ ಸಮೀಪದ ಸರ್ಕಾರಿ ಕಾಲೇಜುಗಳಿಗೂ ನಿಯೋಜನೆ ಮಾಡಬೇಕು. ಮುಂತಾದ ಬೇಡಿಕೆಗಳನ್ನು ಇಲಾಖೆ ಮತ್ತು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಮನವಿಯಲ್ಲಿ ಕೋರಲಾಗಿದೆ. ಮನವಿ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ ಅವರು, ಶಿಕ್ಷಣ ಸಚಿವರು, ಸಂಬAಧಿಸಿದ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಸಭೆಯನ್ನು ಶೀಘ್ರದಲ್ಲಿ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಹೇಮಂತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮಂದಪ್ಪ, ಖಜಾಂಚಿ ಡಾ. ಹೇಮಂತ್ ಕುಮಾರ್ ಹಾಗೂ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಮೌಳಿ ಅವರು ಉಪಸ್ಥಿತರಿದ್ದರು.