ಸೋಮವಾರಪೇಟೆ, ಸೆ. ೧: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಸದಸ್ಯರು ಚುನಾವಣಾಧಿಕಾರಿಗಳೂ ಆಗಿರುವ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಮತ್ತೆ ವಿಳಂಬವಾದರೆ ಸೆ. ೩ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ತಾಲೂಕು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಸಲ್ಲಿಸಿರುವ ಸದಸ್ಯರುಗಳು, ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಆ.೭ ರಂದು ಜಿಲ್ಲಾಧಿಕಾರಿಯ ಕಚೇರಿಯಿಂದ ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದರೂ ತಾವುಗಳು ಈವರೆಗೆ ಚುನಾವಣೆ ಘೋಷಿಸಿಲ್ಲ. ಅಧಿಕೃತ ಜ್ಞಾಪನಾಪತ್ರ ಬಂದು ಈಗಾಗಲೇ ೨೩ ದಿನಗಳು ಕಳೆದಿವೆ. ತಕ್ಷಣ ಚುನಾವಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಲವಾರು ಪಟ್ಟಣ ಪಂಚಾಯಿತಿಗಳಲ್ಲಿ ಈಗಾಗಲೇ ಚುನಾವಣೆಯನ್ನು ಘೋಷಿಸಿ ಅಧ್ಯಕ್ಷರ ಆಯ್ಕೆಯನ್ನು ನಡೆಸಿರುತ್ತಾರೆ. ಆದರೆ ಸೋಮವಾರಪೇಟೆಯಲ್ಲಿ ಚುನಾವಣೆಯನ್ನು ಘೋಷಣೆ ಮಾಡುವುದರಲ್ಲಿ ವಿಳಂಬ ಧೋರಣೆ ಕಾಣುತ್ತಿದೆ. ಒಂದೊಮ್ಮೆ ಚುನಾವಣೆ ನಡೆಸುವುದನ್ನು ಮತ್ತೆಯೂ ಮುಂದೂಡಿದರೆ ತಾ. ೩ರಂದು ತಹಶೀಲ್ದಾರ್ ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಸದಸ್ಯರುಗಳು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿಗೆ ಪ.ಪಂ. ಸದಸ್ಯರುಗಳಾದ ಮೃತ್ಯುಂಜಯ, ಸಂಜೀವ, ಶುಭಕರ್, ನಾಗರತ್ನ ಅವರುಗಳು ಸಹಿ ಹಾಕಿದ್ದು, ತಮ್ಮ ಸಹಿಯೊಂದಿಗೆ ಇತರ ಸದಸ್ಯರುಗಳಾದ ಬಿ.ಆರ್. ಮಹೇಶ್, ಪಿ.ಕೆ. ಚಂದ್ರು, ಮೋಹಿನಿ ಅವರುಗಳು ತಹಶೀಲ್ದಾರ್ ಶ್ರೀಧರ್ ಅವರಿಗೆ ಸಲ್ಲಿಸಿದರು.