ಪೊನ್ನಂಪೇಟೆ, ಸೆ. ೨ : ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊನ್ನಂಪೇಟೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ ೮ ಜಾನುವಾರುಗಳನ್ನು ರಕ್ಷಣೆ ಮಾಡಿ, ಜಾನುವಾರು ಸಾಗಾಟಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿದೆ.

ಪೊನ್ನAಪೇಟೆ ತಾಲೂಕಿನ ಬಾಳೆಲೆ ಸಮೀಪದ ದೇವನೂರು ಗ್ರಾಮದಲ್ಲಿ ತಾ. ೨ ರಂದು ಬೆಳಗಿನ ಜಾವ ೩.೫೦ ರ ಸಮಯದಲ್ಲಿ, ಎರಡು ಮೂರು ಜನರ ತಂಡ ಟಾಟಾ ವಿಂಗರ್ ವಾಹನ (ಕೆ.ಎಲ್.೨೫ ಬಿ ೫೫೦೯) ಮತ್ತು ಆಲ್ಟೊ ಕಾರಿನಲ್ಲಿ (ಕೆ.ಎಲ್.೫೫ ಎಫ್ ೨೫೭೬) ಬಂದು, ಟಾಟಾ ವಿಂಗರ್ ವಾಹನಕ್ಕೆ ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬುತ್ತಿದ್ದಾರೆ ಎಂದು ದೂರವಾಣಿ ಮೂಲಕ ಕರೆ ಬಂದ ಹಿನ್ನೆಲೆಯಲ್ಲಿ, ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ತಂಡ ತೆರಳಿದಾಗ ಆರೋಪಿಗಳು ವಾಹನಗಳನ್ನು ಬಿಟ್ಟು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.

ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ. ರಕ್ಷಣೆ ಮಾಡಿದ ಜಾನುವಾರುಗಳನ್ನು ಮೈಸೂರಿನ ಪಿಂಜರಾ ಪೋಲ್‌ಗೆ ಸಾಗಿಸಲಾಗಿದೆ.

ಎಸ್.ಪಿ ರಾಮರಾಜನ್ ಹಾಗೂ ಎಎಸ್‌ಪಿ ಸುಂದರ್‌ರಾಜ್ ನಿರ್ದೇಶನದ ಮೇರೆಗೆ, ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸಿಐ ಶಿವರಾಜ್ ಮುಧೋಳ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಠಾಣೆ ಸಬ್‌ಇನ್ಸ್ಪೆಕ್ಟರ್ ನವೀನ್, ಸಿಬ್ಬಂದಿ ಮಹದೇಶ್ವರಸ್ವಾಮಿ, ಪ್ರಸನ್ನ, ಮಂಜುನಾಥ್, ಬಾಳಪ್ಪ ಇನ್ನಿತರರು ಪಾಲ್ಗೊಂಡಿದ್ದರು.