ನಾಪೋಕ್ಲು, ಸೆ. ೧: ಪ್ರತಿಯೊಬ್ಬ ಮನುಷ್ಯನಿಗೆ ದೃಷ್ಟಿ ಎಂಬುದು ಬಹಳ ಮುಖ್ಯ. ಕಣ್ಣಿನ ದೃಷ್ಟಿ ಕಳೆದುಕೊಂಡರೆ ಜೀವನ ಕಷ್ಟ ಸಾಧ್ಯ ಎಂದು ಇಲ್ಲಿಯ ಶಹ್ಮ ಆಪ್ತಿಕಲ್ಸ್ ಕಣ್ಣಿನ ಕ್ಲಿನಿಕ್ ಮಾಲೀಕ ಷಂಶುದ್ದೀನ್ ಹೇಳಿದರು.

ನಾಪೋಕ್ಲುವಿನ ಆಟೋ ಚಾಲಕರಿಗೆ ಶಹ್ಮ ಆಪ್ತಿಕಲ್ಸ್ ಕ್ಲಿನಿಕ್‌ನಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿನಿತ್ಯ ಜನರನ್ನು ಕರೆದೊಯ್ಯುವ ಆಟೋ ಚಾಲಕರಿಗೆ ಕಣ್ಣಿನ ಸಂರಕ್ಷಣೆ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಶಹ್ಮ ಆಪ್ತಿಕಲ್ಸ್ ವತಿಯಿಂದ ಆಟೋ ಚಾಲಕರಿಗೆ ಉಚಿತ ನೇತ್ರ ತಪಾಸಣೆ ಮಾಡಿ ಅವಶ್ಯಕತೆ ಇದ್ದವರಿಗೆ ಪರಿಶೀಲಿಸಿ ಕನ್ನಡಕ ನೀಡಲಾಗುವುದು ಎಂದರು.

ನಾಪೋಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ಟಿ.ಕೆ. ಸುಕುಮಾರ್ ಮಾತನಾಡಿ, ಹಲವು ರೀತಿಯ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ಆಟೋ ಚಾಲಕರಿದ್ದಾರೆ. ಅವರ ನೆರವಿಗೆ ಕಾರ್ಯೋನ್ಮುಖವಾದ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಶಹ್ಮ ಕ್ಲಿನಿಕ್ ಮಾಲೀಕ ಷಂಶುದ್ದೀನ್ ನಾಪೋಕ್ಲು ಆಟೋ ಚಾಲಕರ ಸಂಘದ ಅಧ್ಯಕ್ಷ ಟಿ.ಕೆ. ಸುಕುಮಾರ್ ಅವರ ನೇತ್ರ ತಪಾಸಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಈ ಸಂದರ್ಭ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್, ಕಾರ್ಯದರ್ಶಿ ಸತೀಶ್, ಸಂಘದ ಪದಾಧಿಕಾರಿಗಳು, ಸದಸ್ಯರು, ಕ್ಲಿನಿಕ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.