ಸೋಮವಾರಪೇಟೆ,ಸೆ.೧: ಸಮೀಪದ ಐಗೂರು ಗ್ರಾಮ ಪಂಚಾಯಿತಿಯಲ್ಲಿ ಬರೋಬ್ಬರಿ ೨೬ ಲಕ್ಷಕ್ಕೂ ಅಧಿಕ ಹಣ ದುರುಪಯೋಗ ಆಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ, ಕುಂದುಕೊರತೆ ನಿವಾರಣಾ ಪ್ರಾಧಿಕಾರ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿದ್ದು, ಇದರಲ್ಲಿ ದುರುಪಯೋಗವಾಗಿರುವುದು ಸಾಬೀತಾಗಿರುವ ಹಿನ್ನೆಲೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ. ಮೈಸೂರು ವಿಭಾಗಕ್ಕೆ ಒಳಪಡುವ ಕೊಡಗು ಜಿ.ಪಂ. ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷ ಕೆ. ಕರಿಯಪ್ಪ ಅವರು ಪ್ರಕರಣದ ಬಗ್ಗೆ ತನಿಖೆ ಪೂರ್ಣಗೊಳಿಸಿ, ಐಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಿ. ಬಾಲಕೃಷ್ಣ ಹಾಗೂ ಡಾಟಾಎಂಟ್ರಿ ಆಪರೇಟರ್ ಸರಿತಾ ವಿರುದ್ಧ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲು ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

ಐಗೂರು ಪಂಚಾಯಿತಿಯಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಹಣ ದುರುಪಯೋಗದ ಬಗ್ಗೆ ಯಡವಾರೆ ಗ್ರಾಮದ ನಿವಾಸಿ ಚಿರಿಯಮನೆ ಲವಕುಮಾರ್ ಅವರು ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪ್ರಾಧಿಕಾರ, ಐಗೂರು ಗ್ರಾಮ ಪಂಚಾಯಿತಿಯ ೨೦೨೨-೨೩ ಮತ್ತು ೨೦೨೩-೨೪ನೇ ವರ್ಷದ ಲೆಕ್ಕಪತ್ರ ತಪಾಸಣೆ ನಡೆಸಿದ ಸಂದರ್ಭ ಒಟ್ಟು ೨೬,೩೬,೨೧೦ ರೂಪಾಯಿ ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ.

ಕಂಪ್ಯೂಟರ್ ಆಪರೇಟರ್ ಆಗಿದ್ದ ಸರಿತ ಅವರ ವಿರುದ್ಧ ಈ ಹಿಂದೆ ಪಿಡಿಓ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಹಿಯಿಲ್ಲದೇ ಹಣ ವರ್ಗಾವಣೆ ಸಾಧ್ಯವಿಲ್ಲ ಎಂದು ದೂರುದಾರರು ಆರೋಪಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಸರಿತ ಅವರನ್ನು ಈ ಹಿಂದೆಯೇ ಐಗೂರು ಗ್ರಾಮ ಪಂಚಾಯಿತಿ ಅಮಾನತುಗೊಳಿಸಿತ್ತು. ಪಿ.ಡಿ.ಓ. ಬಾಲಕೃಷ್ಣ ಅವರು ನಿನ್ನೆಯವರೆಗೂ ಯಾವುದೇ ಕ್ರಮಕ್ಕೂ ಒಳಗಾಗದೇ ಕರ್ತವ್ಯ ನಿರ್ವಹಿಸಿಕೊಂಡಿದ್ದು, ತಾ. ೩೧.೦೮.೨೦೨೪ರಂದು ನಿವೃತ್ತರಾಗಿದ್ದಾರೆ. ಇವರು ನಿವೃತ್ತರಾಗುವ ೩ ದಿನಗಳ ಮುಂಚೆ ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ತನ್ನ ತನಿಖೆ ಪೂರ್ಣಗೊಳಿಸಿ, ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಿದೆ.