ಪಂಚಾಯಿತಿ ಸದಸ್ಯನ ಲೈಂಗಿಕ ದೌರ್ಜನ್ಯ: ಮನೆ ಧ್ವಂಸ!

ಕೋಲ್ಕತ್ತ, ಸೆ. ೧: ಪಶ್ಚಿಮ ಬಂಗಾಳದಲ್ಲಿ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆಗಳು ಇನ್ನೂ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲೇ ಬಂಗಾಳದಲ್ಲಿ ಮತ್ತೊಂದು ಹೇಯಕೃತ್ಯ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಉತ್ತರ ೨೪ ಪರಗಣಾಸ್ ಜಿಲ್ಲೆಯಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಪಂಚಾಯಿತಿ ಸದಸ್ಯನೋರ್ವ ಲೈಂಗಿಕ ದೌರ್ಜನ್ಯ ಎಸಗಿದ್ದು, ಆತನ ಮನೆಯನ್ನು ಉದ್ರಿಕ್ತರ ಗುಂಪು ಧ್ವಂಸಗೊಳಿಸಿದೆ. ಭಾನುವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಲಾಗಿದ್ದು, ಜಿಲ್ಲೆಯ ರೋಹಂಡಾ ಪಂಚಾಯತ್‌ನ ರಾಜಬರಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

೧೫ ಕೆ.ಜಿ. ತೂಕ ಕಳೆದುಕೊಂಡ ದರ್ಶನ್

ಬಳ್ಳಾರಿ, ಸೆ. ೧: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ಆರೋಪದ ಮೇಲೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿರುವ ಚಾಲೆಂಜಿAಗ್ ಸ್ಟಾರ್ ದರ್ಶನ್‌ಗೆ ಬೆನ್ನುನೋವು ಕಾಡುತ್ತಿದೆ. ಜೈಲು ಸೇರಿದಾಗಿನಿಂದ ಸುಮಾರು ೧೫ ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಎಂದು ಜೈಲಿನ ಸಿಬ್ಬಂದಿ ತೂಕ ಮಾಡಿದಾಗ ತಿಳಿದುಬಂದಿದೆ. ಜೈಲಿನ ಊಟ, ಏಕಾಂಗಿತನ, ಕಟ್ಟುನಿಟ್ಟು ಕ್ರಮದಿಂದ ದರ್ಶನ್ ದೇಹತೂಕ ಕಳೆದುಕೊಂಡಿದ್ದಾರೆ. ಬಳ್ಳಾರಿ ಜೈಲಿಗೆ ಬಂದಾಗ ಸಿಬ್ಬಂದಿ ಅವರ ಆರೋಗ್ಯ ತಪಾಸಣೆ ಮಾಡಿ ತೂಕ ಮಾಡಿದಾಗ ೧೫ ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ

ಬೆAಗಳೂರು, ಸೆ. ೧: ಕಾರುಗಳ ಗಾಜುಗಳನ್ನು ಒಡೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ರಾಮಜೀನಗರ ಗ್ಯಾಂಗ್ ಸದಸ್ಯರ ಸಹಿತ ನಾಲ್ವರು ಆರೋಪಿಗಳನ್ನು ಇಲ್ಲಿನ ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುರಳಿ (೩೮), ಸೆಂಥಿಲ್ (೫೦) ಮತ್ತು ಮೂರ್ತಿ (೪೯) ಹಾಗೂ ಕದ್ದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಜಾನ್ (೩೫) ಬಂಧಿತ ಆರೋಪಿಗಳು. ಇವರಿಂದ ೭ ಲ್ಯಾಪ್‌ಟಾಪ್‌ಗಳ ಸಹಿತ ೫.೮೫ ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ಬದಿ ಪಾರ್ಕ್ ಮಾಡಿ ಶಾಪಿಂಗ್, ಬ್ಯಾಂಕ್ ಕೆಲಸಕ್ಕೆಂದು ಹೋಗುವವರನ್ನು ಈ ಖತರ್ನಾಕ್ ಕಳ್ಳರ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಪಾರ್ಕಿಂಗ್ ಮಾಡಿ ನಿಲ್ಲಿಸುತ್ತಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಲ್ಯಾಪ್‌ಟಾಪ್ ಬ್ಯಾಗ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಎತ್ತೊಯ್ಯುತ್ತಿತ್ತು. ತಮಿಳುನಾಡಿನ ತಿರುಚನಾಪಳ್ಳಿ ಮೂಲದ ಆರೋಪಿಗಳು ಬೇರೆ ಬೇರೆ ನಗರಗಳಲ್ಲಿ ಸ್ಥಿತಿವಂತರು ಹೆಚ್ಚಾಗಿ ನೆಲೆಸಿರುವ ಏರಿಯಾಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮನೆ ಬಳಿ ನಿಲ್ಲಿಸಿರುವ ಕಾರುಗಳ ಗಾಜಿನ ಮೂಲಕ ಒಳಗೆ ಏನೇನಿದೆ ಎಂದು ಗಮನಿಸಿ, ರಬ್ಬರ್ ಬ್ಯಾಂಡ್ ಹಾಗೂ ಗೋಲಿ ಸಹಾಯದಿಂದ ಗಾಜನ್ನು ಒಡೆಯುತ್ತಿದ್ದರು. ನಂತರ ಒಳಗಿರುವ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಆರೋಪಿ ಜಾನ್‌ಗೆ ಮಾರಾಟ ಮಾಡುತ್ತಿದ್ದರು. ಆಗಸ್ಟ್ ೧೧ರಂದು ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು, ಮತ್ತೊಂದು ಕೃತ್ಯಕ್ಕೆ ಆರೋಪಿಗಳು ಸಜ್ಜಾಗಿದ್ದಾಗಲೇ ಬಂಧಿಸಿದ್ದಾರೆ.

ಏಳು ನುಸುಳುಕೋರರ ಬಂಧನ

ಅಗರ್ತಲಾ, ಸೆ. ೧: ಸರಿಯಾದ ದಾಖಲೆಗಳಿಲ್ಲದೆ ತ್ರಿಪುರಾ ಪ್ರವೇಶಿಸಿದ ಐವರು ಬಾಂಗ್ಲಾದೇಶಿಗಳು ಮತ್ತು ಇಬ್ಬರು ರೋಹಿಂಗ್ಯಾಗಳನ್ನು ಪ್ರತ್ಯೇಕ ಕಡೆಗಳಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಶುಕ್ರವಾರ ಅಗರ್ತಲಾ ನಿಲ್ದಾಣದಿಂದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆ ವೇಳೆ, ತಾವು ನೆರೆಯ ದೇಶದ ಕಾಕ್ಸ್ ಬಜಾರ್ ರೋಹಿಂಗ್ಯಾ ಶಿಬಿರದಲ್ಲಿ ಇದಿದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ. ರಂಜಾನ್ ಅಲಿ ಮತ್ತು ಅಜಿದಾ ಬೇಗಂ ಅಂತಾರಾಷ್ಟ್ರೀಯ ಗಡಿ ದಾಟಿ ರೈಲಿನಲ್ಲಿ ಕೋಲ್ಕತ್ತಾಗೆ ಹೋಗಲು ಯೋಜಿಸಿದ್ದರು ಎಂದು ಅಗರ್ತಲಾ ನಿಲ್ದಾಣದ ಅಧಿಕಾರಿ ತಪಸ್ ದಾಸ್ ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ ಧಲೈ ಜಿಲ್ಲೆಯಲ್ಲಿ ಐವರು ಬಾಂಗ್ಲಾದೇಶಿ ನುಸುಳುಕೋರರು ಮತ್ತು ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ. ಬಂಧಿತ ಬಾಂಗ್ಲಾದೇಶೀಯರೆಲ್ಲರೂ ನೆರೆಯ ದೇಶದ ಮೌಲ್ವಿಬಜಾರ್ ಮತ್ತು ಸಿಲ್ಹೆಟ್ ಜಿಲ್ಲೆಗಳ ನಿವಾಸಿಗಳು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶದ ಪ್ರಜೆಗಳು ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಇಬ್ಬರು ಭಾರತೀಯರು ಅಕ್ರಮ ವಲಸೆಯನ್ನು ಸುಗಮಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ವೃದ್ಧ ವ್ಯಕ್ತಿಗೆ ರೈಲಿನಲ್ಲಿ ಹಿಗ್ಗಾಮುಗ್ಗಾ ಹಲ್ಲೆ

ನಾಸಿಕ್, ಸೆ. ೧: ಮಹಾರಾಷ್ಟçದ ನಾಸಿಕ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ದನದ ಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯಿAದ ವೃದ್ಧನೊಬ್ಬನ ಮೇಲೆ ಸಹ ಪ್ರಯಾಣಿಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವೃದ್ಧನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ. ಅದರಲ್ಲಿ ಹನ್ನೆರಡು ಮಂದಿ ಸುತ್ತುವರಿದು ಆ ವ್ಯಕ್ತಿಗೆ ಹಲ್ಲೆ ನಡೆಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಬೆದರಿಕೆಗಳನ್ನು ಹಾಕುವುದನ್ನು ಕಾಣಬಹುದು. ಘಟನೆಯ ಕುರಿತು ಸರ್ಕಾರಿ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದು, ಇದರಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳನ್ನು ಗುರುತಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಜಿಆರ್‌ಪಿ ಪ್ರಕಾರ, ಸಂತ್ರಸ್ತ ವೃದ್ಧ, ಜಲಗಾಂವ್ ಜಿಲ್ಲೆಯ ನಿವಾಸಿ ಹಾಜಿ ಅಶ್ರಫ್ ಮುನ್ಯಾರ್ ತನ್ನ ಮಗಳ ಮನೆಗೆ ಹೋಗಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದು ಮೇಕೆ ಮಾಂಸವೇ ಹೊರತು ದನದ ಮಾಂಸವಲ್ಲ ಎಂದು ವೃದ್ಧ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಬಂದಿದೆ. ದಾಳಿಕೋರರು ಇದನ್ನು ಕೇಳಲು ಸಿದ್ಧರಿರಲಿಲ್ಲ,. ಆತ ಗೋಮಾಂಸ ಸಾಗಿಸುತ್ತಿದ್ದಾನೆಂದು ಭಾವಿಸಿ ಯುವಕರು ಆತನನ್ನು ಥಳಿಸಿದ್ದಾರೆ.

ಆಂಧ್ರದಲ್ಲಿ ಭಾರೀ ಮಳೆಗೆ ೮ ಮಂದಿ ಬಲಿ

ಹೈದರಾಬಾದ್, ಸೆ. ೧: ಆಂಧ್ರಪ್ರದೇಶದ ವಿಜಯವಾಡದಲ್ಲಿ ಭಾರೀ ಮಳೆಯ ಪರಿಣಾಮ ಉಂಟಾದ ಭೂಕುಸಿತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬ ಸದಸ್ಯರಿಗೆ ತಲಾ ೫ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ಆರ್ಭಟಕ್ಕೆ ವಿಶಾಖಪಟ್ಟಣಂನ ಜನ ವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಎಲ್ಲೆಲ್ಲೂ ಮಳೆ ನೀರು ಆವರಿಸಿದೆ. ಜನರನ್ನು ಹಗ್ಗಕಟ್ಟಿ ಸುರಕ್ಷಿತ ಸ್ಥಳಗಳಿಗೆ ಕರೆತರುವಾಗ ಕೆಲವರು ಕೊಚ್ಚಿ ಹೋಗಿದ್ದಾರೆ. ಇನ್ನು ಕೆಲವರನ್ನು ಸುರಕ್ಷಿವಾಗಿ ರಕ್ಷಿಸಲಾಗಿದೆ. ವಿಶಾಖಪಟ್ಟಣಂನ ಕೆಲ ಕಾಲೋನಿಗಳು ಕೆರೆಗಳಂತಾಗಿವೆ. ಮೊಗಲ್ರಾಜಪುರಂ ಕಾಲೋನಿಯಲ್ಲಿ ನಿರಂತರ ಮಳೆಗೆ ಭೂಕುಸಿತ ಭಾರೀ ಹಾನಿಯನ್ನುಂಟು ಮಾಡಿದೆ. ಪ್ರವಾಹದಂತಹ ಪರಿಸ್ಥಿತಿಯಿಂದ ಸಾಕಷ್ಟು ಹಾನಿ ಸಂಭವಿಸಿರುವುದರಿAದ, ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲು ಮತ್ತು ಹೆಚ್ಚಿನ ಹಾನಿಯಾಗುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಪ್ರತಿ ಜಿಲ್ಲೆಗೆ ತಕ್ಷಣವೇ ೩ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ನಾಯ್ಡು ಅಧಿಕಾರಿಗಳಿಗೆ ಸೂಚಿಸಿದ್ದಾರೆ.