ಶನಿವಾರಸಂತೆ, ಸೆ. ೧: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ದೇವರ ಭತ್ತದ ಗದ್ದೆಯಲ್ಲಿ ಗ್ರಾಮದ ಜನರು ನಾಟಿ ಮಾಡಿ ಸಾಮೂಹಿಕ ಭೋಜನ ಸವಿದರು.

ಹಾರಳ್ಳಿ ಗ್ರಾಮದ ಶ್ರೀ ಚೆನ್ನಕೇಶವ ದೇವಾಲಯಕ್ಕೆ ಸೇರಿದ ೩ ಎಕರೆ ಗದ್ದೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮಸ್ಥರೇ ಗದ್ದೆ ಕೆಲಸ ಮಾಡಿ, ನಾಟಿ ಮಾಡಿ ಶ್ರಮದಾನ ಮಾಡಿದರು. ಬೆಳೆದ ಭತ್ತವನ್ನು ಮಾರಾಟ ಮಾಡುವಾಗ ಗ್ರಾಮಸ್ಥರು ಖರೀದಿಸಬಹುದು. ಇಲ್ಲವಾದಲ್ಲಿ ಮಂಡಿ ಅಥವಾ ಮಿಲ್ಲುಗಳಿಗೆ ಮಾರಾಟ ಮಾಡಲಾಗುವುದು. ಭತ್ತ ಮಾರಾಟ ಮಾಡಿ ಬಂದ ಹಣವನ್ನು ದೇವಾಲಯದ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಗ್ರಾಮದ ಪ್ರಮುಖ ರಘುಹಾರಳ್ಳಿ ಹೇಳಿದರು. ನಾಟಿ ಕೆಲಸದಲ್ಲಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ರುದ್ರಪ್ಪ, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.