ಮಡಿಕೇರಿ, ಸೆ. ೨: ಪ್ರತಿ ೫ ವರ್ಷಕ್ಕೊಮ್ಮೆ ನಡೆಯುವ ಜಾನುವಾರು ಗಣತಿಗೆ ಈ ಬಾರಿ ಹೈಟೆಕ್ ಸ್ಪರ್ಶ ನೀಡಿದ್ದು, ಅಂಗೈನಲ್ಲೇ ಜಾನುವಾರುಗಳ ಗಣತಿ ನಡೆಯಲಿದೆ. ಅದರಂತೆ ಜಿಲ್ಲೆಯಲ್ಲಿಯೂ ಸಹ ಸೆಪ್ಟೆಂಬರ್ ೧ ರಿಂದ ಡಿಸೆಂಬರ್ ಅಂತ್ಯದವರೆಗೂ ೪ ತಿಂಗಳ ಕಾಲ ಪ್ರತಿ ಮನೆಗೂ ಗಣತಿದಾರರು ಭೇಟಿ ನೀಡಿ ಅಂಕಿ-ಅAಶ ದಾಖಲಿಸಲಿದ್ದಾರೆ.

೧೯೧೯ ರಿಂದ ಜಾನುವಾರು ಗಣತಿ ನಡೆಯುತ್ತಾ ಬಂದಿದ್ದು, ಕಳೆದ ೧೦೦ ವರ್ಷಗಳಲ್ಲಿ ೨೦ ಗಣತಿ ನಡೆದಿದೆ. ಈಗ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ೨೧ ನೇ ಜಾನುವಾರು ಗಣತಿ ನಡೆಯುತ್ತಿದೆ. ಹಿಂದೆಲ್ಲ ಪುಸ್ತಕದಲ್ಲಿ ಗಣತಿ ಕಾರ್ಯ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಬಳಸಿ ಪ್ರತಿ ಮನೆ ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ.

ಕೇಂದ್ರ ಪಶುಸಂಗೋಪನಾ ಇಲಾಖೆಯಿಂದಲೇ ೨೧ ನೇ ಲೈವ್ ಸ್ಟಾಕ್ ಸೆನ್ಸಸ್ ಎನ್ನುವ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಲಾಗಿದೆ. ಇದರ ಬಗ್ಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ವಿಶೇಷ ಎಂದರೆ ಇದರಲ್ಲಿ ಎಲ್ಲೋ ಕೂತು ಕಾಟಾಚಾರಕ್ಕೆ ಗಣತಿ ಮಾಡಲು ಸಾಧ್ಯವೇ ಇಲ್ಲ, ಏಕೆಂದರೆ ಗಣತಿದಾರರ ಪ್ರತಿ ಚಲನವಲನಗಳು ಇದರಲ್ಲಿ ರೆಕಾರ್ಡ ಆಗಲಿದ್ದು, ಪ್ರತಿ ಸೆಕೆಂಡ್, ಸ್ಥಳ ಎಲ್ಲವೂ ದಾಖಲಾಗಿದೆ.

ಎಲ್ಲವೂ ಆನ್‌ಲೈನ್‌ನಲ್ಲೇ: ಈ ಹಿಂದೆ ಜಾನುವಾರು ಗಣತಿ ಮಾಡಬೇಕಾದರೆ ಪುಸ್ತಕದಲ್ಲಿ ೨೦೦ ಕಾಲಂಗಳನ್ನು ಭರ್ತಿ ಮಾಡಬೇಕಾಗಿತ್ತು. ಆದರೆ ಈ ಬಾರಿ ಚುಟುಕಾಗಿ ಆಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್ವರ್ಕ್ ಇಲ್ಲದಿದ್ದರೂ ಈ ಆಪ್ ನೆಟ್‌ವರ್ಕ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳುವAತೆ ವಿನ್ಯಾಸಪಡಿಸಲಾಗಿದೆ ಹೀಗಾಗಿ ಎಲ್ಲವೂ ಕರಾರುವಕ್ಕಾಗಿ ನಮೂದಾಗಲಿದೆ.

ಜಾನುವಾರು ಗಣತಿಗಾಗಿ ಒಟ್ಟು ಕೊಡಗು ಜಿಲ್ಲೆಯಲ್ಲಿ ೫೯ ಗಣತಿದಾರರು, ೧೨ ಮೇಲ್ವಿಚಾರಕರು ಇರುತ್ತಾರೆ, ಗಣತಿದಾರರು ಮನೆಮನೆಗೆ ತೆರಳಿದರೆ ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಲಿದ್ದಾರೆ, ನಗರ ಭಾಗದಲ್ಲಿ ೪೫೦೦ ಮನೆಗಳಿಗೊಬ್ಬ ಗಣತಿದಾರ ಇದ್ದರೆ, ಗ್ರಾಮೀಣ ಭಾಗದಲ್ಲಿ ೨೫೦೦ ಮನೆಗಳಿಗೊಬ್ಬ ಗಣತಿದಾರ ಇರುತ್ತಾರೆ, ಪ್ರತಿಯೊಬ್ಬರೂ ಮನೆಗಳಿಗೆ ಭೇಟಿ ನೀಡಿ ಗಣತಿ ನಡೆಸುವುದು ಕಡ್ಡಾಯವಾಗಿದೆ.

ಹೇಗೆ ನಡೆಯಲಿದೆ ಗಣತಿ?: ಯಾವ ತಳಿಯ ಜಾನುವಾರುಗಳು? ವಯಸ್ಸು ಎಷ್ಟು? ಎಷ್ಟು ರೈತರು? ಯಾವ ವರ್ಗದ ರೈತರು? ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ದಾಖಲಿಸಬೇಕು. ಆ ಮೂಲಕ ಸರ್ಕಾರ ತಮ್ಮ ಮುಂದಿನ ಯೋಜನೆಯನ್ನು ಸಿದ್ಧ್ದಪಡಿಸುವುದು ಇದರ ಮುಖ್ಯ ಉದ್ದೇಶ, ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ, ಕಾರ್ಯಕ್ರಮ ನಿರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ.

ಮನೆಗಳಲ್ಲಿ ಸಾಕಲಾಗುವ ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟಿçಚ್ ಹಕ್ಕಿಗಳ ಮಾಹಿತಿ ಪಡೆಯಲಾಗುತ್ತದೆ, ಬೀಡಾಡಿ ದನ, ನಾಯಿಗಳ ಮಾಹಿತಿಯನ್ನು ಸೇರಿಸಲಾಗುತ್ತದೆ. ದೇವಸ್ಥಾನದಲ್ಲಿ ಆನೆ, ದನ ಸಾಕುವುದಿದ್ದರೆ, ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. ೧೦ಕ್ಕಿಂತ ಜಾಸ್ತಿ ದನಗಳಿದ್ದರೆ, ೧೦೦೦ ಕ್ಕಿಂತ ಹೆಚ್ಚು ಕೋಳಿ ಸಾಕಿದರೆ, ೫೦ರ ಮೇಲ್ಪಟ್ಟು ಆಡು ಸಾಕಾಣೆ ಇದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಲು ನಿರ್ಧರಿಸಲಾಗಿದೆ.

ಎಲ್ಲರಿಗೂ ತರಬೇತಿ: ಜಾನುವಾರು ಗಣತಿ ಸಂಬAಧ ಮಾಸ್ಟರ್ ಟ್ರೇನರ್ ಗಳ ತರಬೇತಿ ಪೂರ್ಣಗೊಂಡಿದ್ದು, ಎಲ್ಲಾ ಮೆಲ್ವಿಚಾರಕರಿಗೆ ಹಾಗೂ ಎಣಿಕೆದಾರರಿಗೆ ಜಿಲ್ಲೆಯ ಮಾಸ್ಟರ್ ಟ್ರೇನರ್‌ಗಳ ಮೂಲಕ ತರಬೇತಿ ಕಾರ್ಯಕ್ರಮವೂ ಪೂರ್ಣಗೊಂಡಿದೆ ಹಾಗೂ ಸೆಪ್ಟೆಂಬರ್ ೧ ರಿಂದ ಗಣತಿಕಾರ್ಯಕ್ಕೆ ಎಲ್ಲಾ ತಯಾರಿಯೂ ನಡೆದಿದೆ.

೨೦೧೯ ರಲ್ಲಿ ಎಷ್ಟಿತ್ತು?: ೨೦೧೯ರಲ್ಲಿ ನಡೆದಿದ್ದ ಜಾನುವಾರು ಗಣತಿಯಲ್ಲಿ ಜಿಲ್ಲೆಯಲ್ಲಿ ೭೧,೬೮೪ ಹಸುಗಳು, ೫,೨೩೬ ಎಮ್ಮೆಗಳು, ೬೫೦ ಕುರಿಗಳು ಹಾಗೂ ೭,೬೦೩ ಮೆಕೆಗಳು, ೮೩೬೫ ಹಂದಿಗಳು ಇದ್ದವು, ಆದರೆ ಈ ಬಾರಿ ಸಾಕಷ್ಟು ಏರಿಳಿತ ಆಗುವ ನಿರೀಕ್ಷೆ ಇದೆ. ಏಕೆಂದರೆ ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ನಗರೀಕರಣವಾಗಿದೆ, ಅಲ್ಲದೇ ಕೃಷಿಯಲ್ಲೂ ಬದಲಾವಣೆಯಾಗಿದ್ದು ಇದು ಜಾನುವಾರು ಸಾಕಾಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಬಾರಿ ಏನಾಗಬಹುದು?: ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಕರಿಮೆಣಸು ಬೆಳೆಯುವ ಉದ್ದೇಶ ಹೆಚ್ಚಾಗಿರುವುದರಿಂದ ದಿನ ಕಳೆದಂತೆ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಕೊಳ್ಳುವ ರೈತರ ಸಂಖ್ಯೆ ಕಡಿಮೆಯಾಗುತ್ತಿದ್ದು ಒಟ್ಟಾರೆ ಜಾನುವಾರು ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಅವರು ತಿಳಿಸಿದ್ದಾರೆ.