ಮಡಿಕೇರಿ, ಸೆ. ೧: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ ಸರಾಸರಿ ನೂರು ಇಂಚಿನ ಗಡಿಯನ್ನು ದಾಟಿದ್ದು ಮತ್ತೂ ಮುಂದುವರೆಯುತ್ತಿದೆ.

ಜನವರಿಯಿAದ ಇಲ್ಲಿಯವರೆಗೆ (ಆ.೩೧ರ ತನಕ) ಜಿಲ್ಲೆಯಲ್ಲಿ ಸರಾಸರಿ ೧೦೨.೨೮ ಇಂಚು ಮಳೆ ದಾಖಲಾಗಿದೆ. ೨೦೨೩ರ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ೫೧.೯೭ ಇಂಚುಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಜಿಲ್ಲಾ ಸರಾಸರಿ ೫೦.೩೧ ಇಂಚುಗಳಷ್ಟಾಗಿತ್ತು.

ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನಲ್ಲಿ ಇತರ ತಾಲೂಕುಗಳಿಗಿಂತ ಹೆಚ್ಚಿನ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ೧೪೭.೨೧ ಇಂಚುಗಳಷ್ಟು ದಾಖಲೆಯ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ತಾಲೂಕಿನಲ್ಲಿ ೮೬.೯೩ ಇಂಚು ಮಳೆಯಾಗಿದ್ದು, ಈ ಬಾರಿ ೬೦.೨೭ ಇಂಚು ಅಧಿಕವಿದೆ.

ವೀರಾಜಪೇಟೆ ತಾಲೂಕಿನಲ್ಲೂ ಪ್ರಸಕ್ತ ವರ್ಷ ೫೪.೭೪ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಈ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ ೩೯.೧೫ ಇಂಚು ಮಾತ್ರ ಮಳೆಯಾಗಿದ್ದರೆ, ಈ ಬಾರಿ ೯೩.೯೦ ಇಂಚು ಮಳೆ ಸುರಿದಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ಈ ವರ್ಷ ೯೬.೬೩ ಇಂಚು ಮಳೆಯಾಗಿದೆ. ಕಳೆದ ವರ್ಷ ೪೧.೪೦ ಇಂಚು ಮಳೆ ದಾಖಲಾಗಿದ್ದು, ಈ ಬಾರಿ ೫೫.೨೨ ಇಂಚು ಅಧಿಕ ಕಂಡುಬAದಿದೆ.

ಸೋಮವಾರಪೇಟ ತಾಲೂಕಿನಲ್ಲೂ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಈ ತಾಲೂಕಿನಲ್ಲಿ ೨೦೨೩ರಲ್ಲಿ ಜನವರಿಯಿಂದ ೫೫.೫೬ ಇಂಚು ಮಳೆಯಾಗಿತ್ತು. ಆದರೆ, ಈ ಬಾರಿ ೧೧೪.೬೮ ಇಂಚು ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ೫೯.೧೨ ಇಂಚು ಹೆಚ್ಚಾಗಿದೆ.

ಕುಶಾಲನಗರ ತಾಲೂಕಿನಲ್ಲಿಯೂ ಈ ಬಾರಿ ಮಳೆ ಹೆಚ್ಚಾಗಿದೆ. ಕಳೆದ ವರ್ಷ ೩೨.೧೩ ಇಂಚು ಮಳೆಯಾಗಿದ್ದರೆ, ಈ ಬಾರಿ ೬೧.೭೬ ಇಂಚು ಸುರಿದಿದ್ದು, ೨೯.೬೩ ಇಂಚುಗಳಷ್ಟು ಅಧಿಕ ಪ್ರಮಾಣದಲ್ಲಿದೆ.

ಜಿಲ್ಲಾ ಹಾಗೂ ತಾಲೂಕು ಸರಾಸರಿ ಇದಾಗಿದೆ. ಆದರೆ, ವಿವಿಧ ಹೋಬಳಿಗಳು ಹಾಗೂ ಆಯಾ ಹೋಬಳಿಗಳ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಈ ಬಾರಿ ಇನ್ನಷ್ಟು ಹೆಚ್ಚಾಗಿದೆ. ಅಧಿಕ ಮಳೆಯಿಂದಾಗಿ ಹಲವು ಅನಾಹುತಗಳು ಸಂಭವಿಸಿದೆ. ಕಾಫಿ ಬೆಳೆಯ ಮೇಲೂ ಮಳೆ ಈ ಬಾರಿ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಿದೆ.