ವೀರಾಜಪೇಟೆ, ಸೆ. ೨: ವೀರಾಜಪೇಟೆ ಸಮೀಪದ ಪೆರುಂಬಾಡಿ ಬಳಿಯಿರುವ ತೆರ್ಮೆಕಾಡು ಪೈಸಾರಿಯಲ್ಲಿರುವ ಮೂರು ಕುಟುಂಬದ ಮನೆಗಳಿಗೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯ, ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ವಿದ್ಯುತ್ ಸಂಪರ್ಕ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಪೈಸಾರಿ ನಿವಾಸಿಗಳಾದ ರಾಜೇಶ್, ಕಾಳ, ದೇವಿ ಎಂಬ ಮೂರು ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ಇವರು ಕಲ್ಪಿಸಿಕೊಟ್ಟಿದ್ದಾರೆ.
ಗಣೇಶ್ ಅವರು ಕೆಲವು ದಿನಗಳ ಹಿಂದೆ ಎರಡು ಕುಟುಂಬಗಳ ಸದಸ್ಯರಿಗೆ ತಮ್ಮ ಸ್ವಂತ ಖರ್ಚಿನಿಂದ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದರು.
ತೆರ್ಮೆಕಾಡು ಪೈಸಾರಿಯಲ್ಲಿ ವಾಸವಾಗಿರುವ ರಾಜೇಶ್ ಮತ್ತು ದೇವಿ ಎಂಬುವವರ ಎರಡು ಕುಟುಂಬಗಳ ಮನೆಯಲ್ಲಿ ಐದು ಹೆಣ್ಣು ಮಕ್ಕಳು ಹಾಗೂ ಎರಡನೇ ಪೆರಂಬಾಡಿಯ ಕಾಳನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಗಣೇಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮೂರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಈ ಸಂದರ್ಭ ವೀರಾಜಪೇಟೆ ಚೆಸ್ಕಾಂ ಇಂಜಿನಿಯರ್ ಸೋಮೇಶ್, ಸ್ಥಳೀಯರಾದ ಜನಾರ್ದನ, ಸುರೇಶ್, ಹಾಗೂ ದೀಕ್ಷಿತ ಹಾಜರಿದ್ದರು.