ಕಣಿವೆ, ಸೆ. ೧: ಈ ಬಾರಿ ಶುಂಠಿಯ ಬೆಳೆ ಹಾಗೂ ಬೆಲೆ ಎರಡರಲ್ಲೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದು ಶುಂಠಿ ಬೆಳೆದ ನೈಜ ಬಡ ರೈತನನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷ ಇದೇ ಆಗಸ್ಟ್ ಮಾಸಾಂತ್ಯ ಹಾಗೂ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ೬೦ ಕೆಜಿ ತೂಕದ ಶುಂಠಿ ಫಸಲಿಗೆ ೪ ಸಾವಿರ ರೂಗಳಿಂದ ೫ ಸಾವಿರ ರೂ ಇತ್ತು. ಈಗ ಕೇವಲ ೧೨೦೦ ರೂಗಳಿಂದ ೧೨೫೦ ರೂ ಇದೆ.

ಕಳೆದ ಆರು ತಿಂಗಳ ಹಿಂದೆ ಶುಂಠಿ ಬಿತ್ತನೆ ಮಾಡುವಾಗ ಚೀಲವೊಂದಕ್ಕೆ ೬೫೦೦ ರೂ ಹಣ ಕೊಟ್ಟು ಶುಂಠಿ ಬಿತ್ತನೆ ಮಾಡಿ ಲಕ್ಷ ಲಕ್ಷ ಹಣವನ್ನು ಬೆಳೆಗೆ ವ್ಯಯ ಮಾಡಿ ಬೆಳೆದ ಫಸಲಿಗೆ ಬೆಲೆ ಕುಸಿತಗೊಂಡಿರುವುದು ಬಹಳಷ್ಟು ಮಂದಿಯನ್ನು ಸಂಕಷ್ಟಕ್ಕೆ ತಳ್ಳಿದೆ.

ಈ ಬಾರಿ ಒಂದು ಎಕರೆ ಭೂಮಿಯಲ್ಲಿ ಶುಂಠಿ ಫಸಲು ಕೈಗೊಂಡ ಕೃಷಿಕನಿಗೆ ಬರೋಬ್ಬರಿ ೪.೫೦ ಲಕ್ಷ ರೂಗಳಿಂದ ೫ ಲಕ್ಷ ದವರೆಗೆ ವ್ಯಯವಾಗಿದೆ. ಶುಂಠಿ ಬೆಳೆಗೆ ಹೆಚ್ಚಾಗಿ ಕೊಳೆ ರೋಗ ಬಾಧಿಸಿದ ಪರಿಣಾಮ ಬೆಳೆ ನಷ್ಟ ಒಂದೆಡೆಯಾದರೆ, ಮತ್ತೊಂದೆಡೆ ಇಳುವರಿ ಕುಂಠಿತವಾಗಿದೆ. ಹಾಗಾಗಿ ಈ ಬಾರಿ ಖರ್ಚು ಮಾಡಿದ ಅರ್ಧದಷ್ಟೂ ಹಣ ಬೆಳೆಗಾರನ ಜೇಬಿಗೆ ಮರಳುತ್ತಿಲ್ಲ. ಕೆಲವರಂತು ಮನೆಯ ಮಹಿಳೆಯರ ಮೈಮೇಲಿದ್ದ ಒಡವೆಗಳನ್ನು ಅಡವಿಟ್ಟು ಹಣ ತಂದು ಶುಂಠಿಗೆ ಸುರಿದಿದ್ದಾರೆ.

೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಇನ್ನೂ ಕೆಲವರು ಕಳೆದ ಬಾರಿಯ ಅತ್ಯುತ್ತಮ ಬೆಳೆ ಹಾಗೂ ಬೆಲೆಯ ನಿರೀಕ್ಷೆಯಲ್ಲಿ ಬಡ್ಡಿ ಸಾಲ ಮಾಡಿ ಶುಂಠಿ ಹೊಲಕ್ಕೆ ಹಣ ಹಾಕಿದವರಿದ್ದಾರೆ.

ಈ ನಡುವೆ ಶುಂಠಿ ಖರೀದಿಸುವ ವ್ಯಾಪಾರಿಗಳು ರೈತರಿಗೆ ನಿಖರವಾದ ಬೆಲೆಯನ್ನು ತಮಗೆ ತೋಚುವ ರೀತಿ ಶುಂಠಿ ಖರೀದಿ ಮಾಡುತ್ತಿದ್ದಾರೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಏಕೆಂದರೆ ಹಳ್ಳಿಯಲ್ಲಿ ಇದ್ದುಕೊಂಡು ವಾಣಿಜ್ಯ ಉದ್ದೇಶದ ಈ ಶುಂಠಿ ಬೆಳೆ ಬೆಳೆಯುವ ಬಡ ರೈತನಿಗೆ ರಾಷ್ಟಿçÃಯ ಅಥವಾ ಅಂತರರಾಷ್ಟಿçÃಯ ಮಾರುಕಟ್ಟೆಗಳಲ್ಲಿನ ಶುಂಠಿಯ ಧಾರಣೆಯ ಅರಿವು ಇರುವುದಿಲ್ಲ. ಈ ಕೆಲಸವನ್ನು ತೋಟಗಾರಿಕಾ ಇಲಾಖೆ ಎಪಿಎಂಸಿ ಅಥವಾ ಕೃಷಿ ಇಲಾಖೆಯೂ ಮಾಡುವುದಿಲ್ಲ. ಹಾಗಾಗಿ ಬಡ ರೈತರ ಸಂಕಟವನ್ನು ಕೇಳುವವರಿಲ್ಲ. -ವರದಿ : ಕೆ.ಎಸ್.ಮೂರ್ತಿ