ಮಡಿಕೇರಿ, ಸೆ. ೨: ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಮಿತಿಗಳು ರೂ. ೧೦೦ ಮೌಲ್ಯದ ಬಾಂಡ್ ಪೇಪರ್‌ನಲ್ಲಿ ಮುಚ್ಚಳಿಕೆ ಸಲ್ಲಿಸಬೇಕು ಎಂಬ ನಿರ್ಧಾರವನ್ನು ವಿರೋಧಿಸಿ ಹಾಗೂ ಪರಿಸರ ಮಾಲಿನ್ಯ ನೆಪದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಮಡಿಕೇರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.

ಇಲ್ಲಿನ ನಗರಸಭೆ ಕಚೇರಿ ಎದುರು ಮಳೆಯನ್ನು ಲೆಕ್ಕಿಸದೆ ಜಮಾಯಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಗಣೇಶೋತ್ಸವ ಸಮಿತಿ ಸದಸ್ಯರು ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಲಿನ್ಯ ತಡೆ ಹೆಸರಿನಲ್ಲಿ ಬಿಗಿ ನಿಯಮ, ಧ್ವನಿವರ್ಧಕ ಬಳಕೆಗೆ ಅಡ್ಡಿ, ಗಣೇಶ ಪ್ರತಿಷ್ಠಾಪನೆಗೆ ಬಾಂಡ್ ಸಲ್ಲಿಸಬೇಕು ಸೇರಿದಂತೆ ವಿವಿಧ ನೀತಿಗಳನ್ನು ಖಂಡಿಸಿದ ಪ್ರತಿಭಟನಾ ನಿರತರು, ವರ್ಷಕ್ಕೆ ಒಮ್ಮೆ ಆಚರಣೆ ಮಾಡುವ ಗಣೇಶೋತ್ಸವಕ್ಕೆ ನೀತಿಗಳನ್ನು ಸಡಿಲಗೊಳಿಸಿ ಮುಕ್ತ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಘಟಕ ಕೆ.ಟಿ. ಉಲ್ಲಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರö್ಯ ಹೋರಾಟದ ಉದ್ದೇಶಕ್ಕೆ ಬಾಲಗಂಗಾಧರ ತಿಲಕರು ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಆರಂಭಿಸಿದರು. ಇಂದು ಗಣೇಶ ಪ್ರತಿಷ್ಠಾಪನೆಗೆ ಹತ್ತಾರು ನಿಬಂಧನೆ ಹಾಕಿ ಆಚರಣೆಯನ್ನು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ಆರಂಭವಾಗಿವೆ. ಬ್ರಿಟಿಷರು ಕೂಡ ಇಷ್ಟೊಂದು ನಿಯಮ, ಷರತ್ತು ವಿಧಿಸಿರಲಿಲ್ಲ. ಪರಿಸರ, ಶಬ್ದ ಮಾಲಿನ್ಯ, ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ನೆಪವೊಡ್ಡಿ ಗಣೇಶ ಹಬ್ಬಕ್ಕೆ ಅಡ್ಡಿ ಮಾಡಲಾಗುತ್ತದೆ. ಮೂರ್ತಿ ಪ್ರತಿಷ್ಠಾಪಿಸುವ ಸಮಿತಿಗಳಿಂದ ರೂ. ೧೦೦ ಮೌಲ್ಯದ ಬಾಂಡ್ ಪೇಪರ್‌ನಲ್ಲಿ ಮುಚ್ಚಳಿಕೆ ಬರೆಸಿಕೊಳ್ಳುವ ನಿಯಮವನ್ನು ನಗರಸಭಾ ಪೌರಾಯುಕ್ತ ಮಡಿಕೇರಿಯಲ್ಲಿ ಮಾತ್ರ ಅನ್ವಯಿಸಿ ಜಾರಿ ಮಾಡಿರುವುದು ಖಂಡನೀಯ ಎಂದರು.

ಜನರ ಭಾವನೆ ಸರಕಾರ ಅಥವಾ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ. ಗಣೇಶ ಮೂರ್ತಿ ಅಳತೆಯನ್ನು ಅಧಿಕಾರಿಗಳು ನಿಗದಿಪಡಿಸುವ ಕೆಲಸ ಈ ಹಿಂದೆ ನಡೆದಿತ್ತು. ಇವೆಲ್ಲವನ್ನು ಗಮನಿಸಿದರೆ ಹಿಂದೂಗಳ ಆಚರಣೆಗೆ ಮಾತ್ರ ಈ ರೀತಿ ನಿಯಮ ಹೇರಲಾಗುತ್ತಿರುವುದು ಕಂಡುಬರುತ್ತಿದೆ. ರಾತ್ರಿ ೧೦ ರಿಂದ ಬೆಳಿಗ್ಗೆ ೬ ರ ತನಕ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಗಣೇಶೋತ್ಸವ ಸಂದರ್ಭ ಹೇಳುವ ಅಧಿಕಾರಿಗಳು ಇತರ ಧರ್ಮೀಯರ ಆಚರಣೆ ವಿರುದ್ಧ ಯಾಕೆ ಕ್ರಮಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಶಾಂತಿಯುತವಾಗಿ ಗಣೇಶೋತ್ಸವ ನಡೆಯುತ್ತಿದೆ. ಬಾಂಡ್ ನೀಡಬೇಕೆಂದು ವಿನಾಕಾರಣ ಗೊಂದಲವನ್ನು ನಗರಸಭಾ ಆಯುಕ್ತರು ಸೃಷ್ಟಿ ಮಾಡಿದ್ದಾರೆ. ಜನರ ಭಾವನೆಗಳ ವಿರುದ್ಧ ನಿಯಮ ರೂಪಿ ಸುವುದು ಸರಿಯಲ್ಲ. ಗಣೇಶೋತ್ಸವ ದಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ.

(ಮೊದಲ ಪುಟದಿಂದ) ಸೆರೆಮನೆ ವಾಸ, ಪೊಲೀಸ್ ಪ್ರಕರಣಗಳಿಗೆ ಹಿಂದೂ ಬಾಂಧವರು ಎಂದಿಗೂ ಕುಗ್ಗುವುದಿಲ್ಲ. ದೌರ್ಜನ್ಯ, ದಬ್ಬಾಳಿಕೆ ನಡೆಸಿದರೆ ಹಿಂದೂ ಸಮಾಜ ಸಹಿಸಿಕೊಳ್ಳುವುದಿಲ್ಲ. ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆಯಲು ಸುಲಭವಾಗಲು ಏಕಗವಾಕ್ಷಿ ಕೇಂದ್ರ ತೆರೆಯಬೇಕು. ದೇಶಪ್ರೇಮ ಮೂಡಿಸುವ ಕೆಲಸ ಆಚರಣೆಯಿಂದಾಗಬೇಕು ಎಂದ ಉಲ್ಲಾಸ್, ಪರಿಸರದ ಬಗ್ಗೆ ನಮಗೂ ಕಾಳಜಿ ಇದೆ. ಗೋಮಾಂಸ ಕಡಿದು ತ್ಯಾಜ್ಯವನ್ನು ನದಿಗೆ ಹಾಕುವಾಗ ಮೌನವಹಿಸುವ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೂ ಬಾಂಧವರಿಗೆ ಮಾತ್ರ ಯಾಕೆ ಪಾಠ ಮಾಡುತ್ತದೆ. ‘ಪಿಒಪಿ’ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದ್ದು, ಅಧಿಕಾರಿಗಳು ವಿಸರ್ಜನೆಗೆ ಪೂರಕ ವ್ಯವಸ್ಥೆ ಮಾಡಬೇಕಾಗಿದೆ. ಬಾಂಡ್ ನೀಡಿ ಗಣೇಶೋತ್ಸವ ಆಚರಿಸಿದರೆ ದೇವರಿಗೆ ಮಾಡುವ ಅವಮಾನ ಎಂದು ಕಿಡಿಕಾರಿದರು.

ಹಿಂದೂ ಯುವಶಕ್ತಿ ಸಮಿತಿಯ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಅಧಿಕಾರಗಳ ಕ್ರಮವನ್ನು ಜನಪ್ರತಿನಿಧಿಗಳು ವಿರೋಧಿಸುವ ಬದಲು ಮೌನವಹಿಸಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಬಾಂಡ್ ಸಲ್ಲಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದಿಲ್ಲ ಎಂದು ಹೇಳಿದರು.

ಸರಕಾರಿ ಆದೇಶ - ಪೌರಾಯುಕ್ತರ ಸ್ಪಷ್ಟನೆ

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಾಂಡ್ ನೀಡಬೇಕು ಎಂದು ಮಡಿಕೇರಿ ನಗರಸಭಾ ಪೌರಾಯುಕ್ತ ವಿಜಯ ಅವರು ಹೊರಡಿಸಿರುವ ಪ್ರಕಟಣೆ ಕುರಿತು ಸ್ಪಷ್ಟನೆ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಅಧಿಕಾರಿ ಸ್ಥಳಕ್ಕಾಗಮಿಸುವಂತೆ ಆಗ್ರಹಿಸಿದರು.

ಅನಂತರ ಪೌರಾಯುಕ್ತ ವಿಜಯ ಅವರು ಸ್ಥಳಕ್ಕಾಗಮಿಸಿ ಮಾತನಾಡಿ, ಕಳೆದ ವರ್ಷ ಬಾಂಡ್ ಪಡೆಯುವ ನಿಬಂಧನೆ ಇರಲಿಲ್ಲ. ಈ ಬಾರಿ ಸರಕಾರದಿಂದ ಆದೇಶ ಬಂದ ಹಿನ್ನೆಲೆ ಷರತ್ತು ವಿಧಿಸಿದ್ದೇವೆ. ಸಮಿತಿಗಳ ಬೇಡಿಕೆ ಜಿಲ್ಲಾಡಳಿತ ಮೂಲಕ ಸರಕಾರದ ಗಮನಕ್ಕೆ ತರುತ್ತೇನೆ. ಏಕಗವಾಕ್ಷಿ ಕೇಂದ್ರ ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದರು.

ರೂ. ೧೦೦ ಮೌಲ್ಯದ ಬಾಂಡ್ ನೀಡುವ ಪ್ರಸ್ತಾವನೆ ಆದೇಶದಲ್ಲಿ ಎಲ್ಲೂ ಇಲ್ಲ. ಮಡಿಕೇರಿಗೆ ಮಾತ್ರ ಅನ್ವಯಿಸುವಂತೆ ನಿಯಮ ರೂಪಿಸಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಬಿಗಿ ಪೊಲೀಸ್ ಭದ್ರತೆ

ಪ್ರತಿಭಟನೆ ಹಿನ್ನೆಲೆ ಬಿಗಿಪೊಲೀಸ್ ಬಂದೋಬಸ್ತ್ ಸ್ಥಳದಲ್ಲಿ ಕಲ್ಪಿಸಲಾಗಿತ್ತು. ವೃತ್ತ ನಿರೀಕ್ಷಕ ಪಿ.ಕೆ. ರಾಜು, ಉಪನಿರೀಕ್ಷಕ ಲೋಕೇಶ್ ಸೇರಿದಂತೆ ೩೦ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹ ಸಂಯೋಜಕರುಗಳಾದ ಚೇತನ್, ಯೋಗೇಶ್, ಬೋಜೇಗೌಡ, ಪ್ರಾಂತ ಸಮಿತಿಯ ಸುಭಾಶ್ ತಿಮ್ಮಯ್ಯ, ಪ್ರಮುಖರಾದ ಕುಮಾರ್, ಸುನಿಲ್, ತಿಮ್ಮಯ್ಯ, ದುರ್ಗೇಶ್, ಪುದಿಯೊಕ್ಕಡ ರಮೇಶ್, ನವೀನ್ ಪೂಜಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಅರುಣ್ ಶೆಟ್ಟಿ, ಮನು ಮಂಜುನಾಥ್, ಖಜಾಂಚಿ ಕನ್ನಂಡ ಸಂಪತ್, ವಕ್ತಾರ ಬಿ.ಕೆ. ಅರುಣ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಕವನ್ ಕಾವೇರಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ನಗರಸಭಾ ಸದಸ್ಯರುಗಳಾದ ಕೆ.ಎಸ್.ರಮೇಶ್, ಎಸ್.ಸಿ. ಸತೀಶ್, ಕಾಳಚಂಡ ಅಪ್ಪಣ್ಣ, ಶ್ವೇತಾ ಪ್ರಶಾಂತ್, ಸಬಿತಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಸೇರಿದಂತೆ ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಾಜರಿದ್ದರು.