\ಸೋಮವಾರಪೇಟೆ, ಸೆ. ೨: ಕಳೆದ ೧೫ ತಿಂಗಳಿನಿAದ

ಆಡಳಿತ ಮಂಡಳಿಯಿಲ್ಲದೇ ಆಡಳಿತಾಧಿಕಾರಿಗಳ ಆಳ್ವಿಕೆಯಲ್ಲಿದ್ದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ತಾ. ೧೧ರಂದು ಚುನಾವಣಾ ಪ್ರಕ್ರಿಯೆ ನಡೆಯಲಿದೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ತಾ. ೧೧ ರಂದು ಬೆಳಿಗ್ಗೆ ೯ ಗಂಟೆಯಿAದ ೧೧ ಗಂಟೆಯವರೆಗೆ ನಾಮಪತ್ರ ಸ್ವೀಕಾರ, ಮಧ್ಯಾಹ್ನ ೧ ಗಂಟೆಯಿAದ ೧.೦೫ ರವರೆಗೆ ಪರಿಶೀಲನೆ, ೧.೦೫ರಿಂದ ೧.೧೫ ರವರೆಗೆ ನಾಮಪತ್ರ ಹಿಂಪಡೆಯುವುದು, ಚುನಾವಣೆ ಅವಶ್ಯವಿದ್ದಲ್ಲಿ ೧.೨೦ಕ್ಕೆ ಚುನಾವಣೆ ನಡೆಯಲಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಪಟ್ಟಣ ಪಂಚಾಯಿತಿಯಲ್ಲಿ ಸದಸ್ಯರಾಗಿರುವ ನಾಲ್ವರು ಮಹಿಳೆಯರೂ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಆದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಮೋಹಿನಿ ಅವರು ಮಾತ್ರ ಅರ್ಹರಾಗಿದ್ದಾರೆ.

೧೧ ಸದಸ್ಯ ಬಲದ ಪ.ಪಂ.ನಲ್ಲಿ ಸದ್ಯದ ಮಟ್ಟಿಗೆ ಬಿಜೆಪಿ ಬಹುಮತ ಹೊಂದಿದೆ. ಮೋಹಿನಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರೆ, ನಾಗರತ್ನ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದು, ವಿಧಾನ ಸಭಾ ಚುನಾವಣೆ ಸಂದರ್ಭ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಉಳಿದಂತೆ ಕಾಂಗ್ರೆಸ್‌ನ ಶೀಲಾ ಡಿಸೋಜ, ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಜಯಂತಿ ಶಿವಕುಮಾರ್ ಇದ್ದಾರೆ.

ಮೇಲ್ನೋಟಕ್ಕೆ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ನಲ್ಲಿನ ರಾಜಕೀಯ ಸದ್ಯಕ್ಕೆ ಅಂತರ್ಗಾಮಿಯAತಿದೆ.