ಸಿದ್ದಾಪುರ, ಸೆ. ೧: ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ಸಿದ್ದಾಪುರ ನಗರದಲ್ಲಿ ಭಾನುವಾರ ಹಿಂದೂ ಸಂಘಟನೆಗಳ ವತಿಯಿಂದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಸಿದ್ದಾಪುರದ ಶ್ರೀ ದುರ್ಗಾಭಗವತಿ ದೇವಾಲಯದ ಮುಂಭಾಗದಲ್ಲಿ ಗೋಪೂಜೆ ನೆರವೇರಿತು. ಬಳಿಕ ದುರ್ಗಾಭಗವತಿ ದೇವಾಲಯದ ಬಳಿಯಿಂದ ಚಂಡೆ ವಾದ್ಯದೊಂದಿಗೆ ಶೋಭಾಯಾತ್ರೆ ಪ್ರಾರಂಭವಾಯಿತು.

ಶೋಭಾಯಾತ್ರೆಯಲ್ಲಿ ಕೃಷ್ಣ - ರಾಧೆಯರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಚಂಡೆ ವಾದ್ಯಕ್ಕೆ ನರ್ತಿಸುತ್ತಾ ಮೆರವಣಿಗೆಯುದ್ದಕ್ಕೂ ಸಾಗಿದರು. ಸಿದ್ದಾಪುರದ ಪ್ರಮುಖ ಬೀದಿಗಳ ಮೂಲಕ ಶೋಭಾ ಯಾತ್ರೆಯು ಸಿದ್ದಾಪುರದ ಎಸ್.ಎನ್.ಡಿ.ಪಿ. ಸಭಾಂಗಣದವರೆಗೆ ತೆರಳಿತು. ನಂತರ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ಕೃಷ್ಣಾಷ್ಟಮಿ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಭಾರತಾಂಬೆಗೆ ಪುಷ್ಪಾರ್ಚನೆ ಮಾಡಲಾಯಿತು. ಧಾರ್ಮಿಕ ಸಭೆಯನ್ನುದ್ದೇಶಿಸಿ ವೇದಿಕೆಯಲ್ಲಿದ್ದ ಹಿಂದೂ ಸಂಘಟನೆಯ ಪ್ರಮುಖರು ಮಾತನಾಡಿ, ಹಿಂದೂಗಳು ಸಂಘಟಿತ ರಾಗಿ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಕರೆನೀಡಿದರು. ಸಮಾರಂಭದಲ್ಲಿ ವಿಶ್ವಹಿಂದೂ ಪರಿಷತ್ ಸಂಘಟನೆಯ ಪ್ರಮುಖರಾದ ಸುಬ್ರಮಣಿ, ಬೌದ್ಧಿಕ್ ಧನಂಜಯ, ಪ್ರದೀಪ್, ಎಸ್.ಎನ್.ಡಿ.ಪಿ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರ, ಸಂಘ ಪರಿವಾರದ ಪದಾಧಿಕಾರಿಗಳಾದ ರಮೇಶ, ಸಂತೋಷ್ ಹಾಗೂ ಇನ್ನಿತರರು ಹಾಜರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಯತೀಶ್ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಹಾಜರಿದ್ದರು. ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ದಿನೇಶ್ ಸ್ವಾಗತಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರ ಮಂದಿ ಹಿಂದೂ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

-ವಾಸು.