ಕೂಡಿಗೆ, ಸೆ. ೪ : ಹಲವು ಸಮಸ್ಯೆಗಳ ನಡುವೆಯೂ ಹೆಬ್ಬಾಲೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಪಿ. ಅರುಣಕುಮಾರಿ ತಿಳಿಸಿದರು.

ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಒಂದು ವರ್ಷ ವಾಗಿದೆ. ಆರಂಭದಲ್ಲಿ ಅನುದಾನ ಕೊರತೆಯಿತ್ತು. ಖಾತೆಯಲ್ಲಿ ಹಣವಿಲ್ಲದ ಕಾರಣ ಆರಂಭದಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು.

ಸಣ್ಣ ಪ್ರಮಾಣದ ಕಾಮಗಾರಿಯಿಂದ ಆರಂಭಿಸಿ ಹಂತಹAತವಾಗಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಆದರೆ ಖಾಯಂ ಪಿಡಿಓ ಇಲ್ಲದೆ ತೀವ್ರ ಸಮಸ್ಯೆ ತಲೆದೋರಿದೆ. ಹಿಂದಿನ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರ ನಂತರ ಬಂದ ಅಸ್ಮಾ ಅವರು ಕೂಡ ಹೆಚ್ಚು ಕಾಲ ನಿಲ್ಲದೆ ವರ್ಗಾವಣೆ ಪಡೆದುಕೊಂಡರು. ಸದಸ್ಯರ ನಡುವೆ ಗೊಂದಲ ಕಾರಣ ಅಧಿಕಾರಿಗಳು ನಿಲ್ಲುತ್ತಿಲ್ಲ. ಖಾಯಂ ಪಿಡಿಓಗಾಗಿ ಹಲವು ಬಾರಿ ಸಂಬAಧಿಸಿದವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಇದ್ದ ಓರ್ವ ಪಿಡಿಓ ಸದಸ್ಯರ ನಡುವೆ ಬಿರುಕು ಉಂಟು ಮಾಡಿದರು. ಸಭೆಯ ನಿರ್ಣಯದಂತೆ ಸಮರ್ಪಕವಾಗಿ ಕಾಮಗಾರಿಗಳು ಕೈಗೊಂಡಿಲ್ಲ.

೧೫ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಕೂಡ ಕ್ರಮವಹಿಸಿಲ್ಲ. ವಿರೋಧ ಪಕ್ಷದ ಸದಸ್ಯರು ಅಭಿವೃದ್ಧಿಗೆ ನಿರಂತರವಾಗಿ ತೊಡಕು ಉಂಟುಮಾಡುತ್ತಿರುವ ಕಾರಣ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.

ಪಕ್ಷಬೇಧ ಮರೆತು ಗ್ರಾಮದ ಹಿತದೃಷ್ಟಿಯಿಂದ ಒಗ್ಗೂಡಿ ಕಾರ್ಯನಿರ್ವಹಿಸುವಂತಾಗಬೇಕು. ಜನರ ನಡುವೆ ಗ್ರಾಪಂ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ವೈಯಕ್ತಿಕ ವಿರೋಧ ಬದಿಗೊತ್ತಿ ಗ್ರಾಮದ ಜನರಿಗಾಗಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು. ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಲತಾ, ಸದಸ್ಯರಾದ ಪರಮೇಶ್, ಚಂದ್ರಶೇಖರ್ ಜೋಗಿ ಹಾಗೂ ಪವಿತ್ರಾ ಇದ್ದರು.