ಮಡಿಕೇರಿ, ಸೆ. ೪: ಗೋಣಿಕೊಪ್ಪಲಿನ ವೈಸ್‌ಮೆನ್ ಕ್ಲಬ್ ವತಿಯಿಂದ ತಾ. ೧೫ ರಂದು ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಆವರಣದಲ್ಲಿ ದ್ವಿತೀಯ ವರ್ಷದ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷÀ ಕಾಣತಂಡ ಜಗದೀಶ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಪಂದ್ಯಾವಳಿಯಲ್ಲಿ ೩೦೦ ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ ೧೮೦ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ಲಬ್‌ನ ಯೋಜನಾ ನಿರ್ದೇಶಕ ಬಿ.ಜೆ. ಬೋಪಣ್ಣ ಮಾತನಾಡಿ, ಚೆಸ್ ಪಂದ್ಯಾವಳಿ ೧೩ ವರ್ಷದೊಳಗಿನ ಮಕ್ಕಳ ಪ್ರಥಮ ವಿಭಾಗ, ೧೩ ರಿಂದ ೧೮ ವರ್ಷದೊಳಗಿನ ದ್ವಿತೀಯ ವಿಭಾಗ ಮತ್ತು ಮುಕ್ತ ತೃತೀಯ ವಿಭಾಗಗಳಲ್ಲಿ ನಡೆಯಲಿದೆ ಎಂದು ಹೇಳಿದರು.

ಸ್ಪರ್ಧೆಯ ದಿನದಂದು ಬೆಳಿಗ್ಗೆ ೮.೩೦ಕ್ಕೆ ಸ್ಪರ್ಧಿಗಳು ಸಂತ ಅನ್ನಮ್ಮ ಶಾಲಾ ಆವರಣದಲ್ಲಿದ್ದು, ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಸ್ಪರ್ಧಿಗಳು ಜನ್ಮ ದಿನಾಂಕವನ್ನು ದೃಢೀಕರಿಸುವ ಸರ್ಕಾರ ಯಾವುದೇ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಚೆಸ್ ಬೋರ್ಡ್ ಮತ್ತು ಗಡಿಯಾರವನ್ನು ತರಬೇಕು. ಪಂದ್ಯಾವಳಿಯನ್ನು ಚೆಸ್ ಮಾಸ್ಟರ್ ಹಾಗೂ ಪಂದ್ಯಾವಳಿ ನಿರ್ದೇಶಕ ಪಿ.ಆರ್. ಪ್ರದೀಪ್ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಪಂದ್ಯಾವಳಿಯ ಪ್ರಥಮ ಮತ್ತು ದ್ವಿತೀಯ ವಿಭಾಗಗಳಲ್ಲಿ ಪ್ರಥಮ ಬಹುಮಾನವಾಗಿ ತಲಾ ೮ ಸಾವಿರ, ದ್ವಿತೀಯ ೬ ಸಾವಿರ ಮತ್ತು ತೃತೀಯ ೪ ಸಾವಿರ ರೂ. ಮತ್ತು ಟ್ರೋಫಿಗಳನ್ನು ನೀಡಲಾಗುತ್ತದೆ. ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ೧೦ ಸಾವಿರ ರೂ., ದ್ವಿತೀಯ ೮ ಸಾವಿರ ಮತ್ತು ತೃತೀಯ ೬ ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ ಎಂದು ವಿವರಿಸಿದರು.

ಪಂದ್ಯಾವಳಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.೯೪೪೮೬೪೪೨೬೭, ಮೊ.೭೭೬೦೬೯೯೮೮೧ನ್ನು ಸಂಪರ್ಕಿಸಬಹುದೆAದು ತಿಳಿಸಿದರು.

ಗೋಷ್ಠಿಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಸಿ.ಜೆ. ಆ್ಯಂಟೋ, ಖಜಾಂಚಿ ಅನಿತಾ ಲೋಬೋ, ನಿರ್ದೇಶಕರಾದ ರಾಬಿನ್ ಆಂಟೋನಿ ಉಪಸ್ಥಿತರಿದ್ದರು.