ಗೋಣಿಕೊಪ್ಪಲು, ಸೆ. ೪: ಶ್ರೀ ಕಾವೇರಿ ದಸರಾ ಸಮಿತಿಯ ೪೬ನೇ ವರ್ಷದ ದಸರಾ ಆಚರಣೆಗೆ ಸರ್ಕಾರಕ್ಕೆ ೧ ಕೋಟಿ ಅನುದಾನ ನೀಡುವಂತೆ ಜಿಲ್ಲಾಡಳಿತದ ಮುಂದೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ತಿಳಿಸಿದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಹಳೆಯ ಸಭಾಂ ಗಣದಲ್ಲಿ ಆಯೋಜನೆಗೊಂಡಿದ್ದ ಶ್ರೀ ಕಾವೇರಿ ದಸರಾ ಸಮಿತಿಯ ೨೦೨೩ನೇ ಸಾಲಿನ ೪೫ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಬಾರಿ ನಡೆದ ದಸರಾ ಜನೋತ್ಸವ ಕಾರ್ಯ ಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿದೆ. ದಶಮಂಟಪಗಳು ಉತ್ತಮ ರೀತಿಯಲ್ಲಿ ಸ್ಪಂದನ ವ್ಯಕ್ತಪಡಿಸುವುದರೊಂದಿಗೆ ಉಳಿದ ಎಲ್ಲಾ ಸಮಿತಿಗಳು ತಮ್ಮ ಜವಾ ಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವುದು ಶ್ಲಾಘನೀಯ.

ಈ ಬಾರಿ ದಸರಾ ಜನೋತ್ಸವದ ಯಶಸ್ವಿಗಾಗಿ ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣನವರ ನಿರ್ದೇಶನದ ಮೇರೆ ಕೊಡಗು ಜಿಲ್ಲಾಡಳಿತಕ್ಕೆ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ರೂ. ೧ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಮಿತಿ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ದಶಮಂಟಪ ಗಳಿಗೆ ಅನುದಾನ ನೀಡುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದು ಸಭೆಗೆ ತಿಳಿಸಿದರು.

ಕಳೆದ ಬಾರಿ ನಡೆದ ದಸರಾ ಜನೋತ್ಸವದಲ್ಲಿ ಡಿಜೆ ಬಳಸಿದ ಹಿನ್ನೆಲೆಯಲ್ಲಿ ಪೊಲೀಸರು ಮೂರು ಮಂಟಪಗಳ ಮೇಲೆ ದೂರು ದಾಖಲಿಸಿ ಇಂದಿಗೂ ನ್ಯಾಯಾಲ ಯಕ್ಕೆ ಅಲೆದಾಟ ಮಾಡುತ್ತಿದ್ದೇವೆ. ಎಲ್ಲಾ ಮಂಟಪಗಳಲ್ಲಿಯೂ ಡಿಜೆ ಬಳಸಿದ್ದರೂ ಕೇವಲ ಅರುವತೋಕ್ಕಲುವಿನ ಶಾರದಾಂಬ ದಸರಾ ಸಮಿತಿ, ಮಾರ್ಕೆಟ್‌ನ ನವಚೇತನ ದಸರಾ ಸಮಿತಿ ಹಾಗೂ ಯುವ ದಸರಾ ಸಮಿತಿಗಳ ಮೇಲೆ ಪೊಲೀಸರು ದೂರು ದಾಖಲಿಸಿರು ವುದು ಬೇಸರ ಮೂಡಿಸಿದೆ. ಪೊಲೀಸರು ನೀಡಿದ ಮಾರ್ಗ ಸೂಚಿಗಳನ್ನು ಅಳವಡಿಸಿದ್ದರೂ ಕೇಸ್ ದಾಖಲಿಸಿರುವುದು ಸರಿಯಲ್ಲ. ಈ ಬಾರಿ ಡಿಜೆ ಅಳವಡಿಸಲು ಸಾಧ್ಯವಿಲ್ಲವೇ.? ಎಂದು ಸಭೆಯಲ್ಲಿ ಅರುವತ್ತೋಕ್ಕಲು ಶಾರದಾಂಬ ದಸರಾ ಸಮಿತಿಯ ಮಾಜಿ ಅಧ್ಯಕ್ಷ ಲಾಲು ಸ್ಟಾಲೀನ್ ಯುವ ದಸರಾ ಸಮಿತಿಯ ಮಂಜು, ಶ್ರೀನಿ ಹಾಗೂ ಅಕ್ಷಯ್ ಸಭೆಯ ಗಮನ ಸೆಳೆದರು.

ಸಮಿತಿಯ ಅಧ್ಯಕ್ಷರುಗಳ ಮಾತಿಗೆ ಉತ್ತರಿಸಿದ ಅಧ್ಯಕ್ಷ ಪ್ರಮೋದ್ ಗಣಪತಿ ಮೊದಲಾಗಿ ಡಿಜೆ ಸಂಸ್ಕೃತಿ ನಮ್ಮ ಸಂಸ್ಕೃತಿಯಾಗಿರುವುದಿಲ್ಲ. ಕಳೆದ ಬಾರಿ ಎಲ್ಲಾ ಸಮಿತಿಗಳಿಗೂ ಡಿಜೆ ಅಳವಡಿಸುವ ವಿಚಾರದಲ್ಲಿ ಸಾಕಷ್ಟು ಮಾಹಿತಿ ನೀಡಿದ್ದರೂ ಪೊಲೀಸರ ನಿಯಮಗಳನ್ನು ಪಾಲಿಸದೆ ಇರುವುದು ಪ್ರಕರಣ ದಾಖಲಿಸಲು ಕಾರಣವಾಗಿದೆ. ಈ ಬಾರಿ ಡಿಜೆ ಅಳವಡಿಕೆಯಿಂದ ದೂರ ಇರುವುದು ಒಳಿತು. ಆದ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಸಮಜಾಯಿಷಿಕೆ ನೀಡಿದರು.

ಅಧ್ಯಕ್ಷರ ಮಾತಿಗೆ ತೃಪ್ತರಾಗದ ಮಂಟಪಗಳ ಅಧ್ಯಕ್ಷರುಗಳು ಪ್ರತಿ ಬಾರಿಯೂ ಮಂಟಪಗಳ ಜವಾಬ್ದಾರಿ ನಿರ್ವಹಣೆಗಾಗಿ ದಶಮಂಟಪದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಮಂಟಪಗಳ ಅಧ್ಯಕ್ಷರುಗಳ ಮಾತಿಗೆ ದಶಮಂಟಪದ ಅಧ್ಯಕ್ಷರು ಮನ್ನಣೆ ನೀಡಲಿಲ್ಲ. ಡಿಜೆ ವಿಚಾರದಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದ ವೇಳೆ ಅಧ್ಯಕ್ಷರಿಗೆ ಮಾಹಿತಿ ನೀಡಲು ಶ್ರಮಪಟ್ಟರೂ ಸಾಧ್ಯವಾಗಲಿಲ್ಲ. ಮಂಟಪಗಳ ಕಷ್ಟಕ್ಕೆ ಸ್ಪಂದಿಸಲಿಲ್ಲ ಒಂದು ವೇಳೆ ದಶಮಂಟಪದ ಅಧ್ಯಕ್ಷರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಲ್ಲಿ ಪೊಲೀಸ್ ಪ್ರಕರಣ ದಾಖಲಾಗುತ್ತಿರಲಿಲ್ಲ. ಪ್ರಕರಣ ದಿಂದಾಗಿ ನಷ್ಟ ಸಂಭವಿಸಿದAತಾಗಿದೆ ಎಂದು ತಮ್ಮ ನೋವನ್ನು ಸಭೆಯ ಮುಂದೆ ತೋಡಿಕೊಂಡರು.

ವಿವಿಧ ಮಂಟಪಗಳ ಅಧ್ಯಕ್ಷರುಗಳ ಮಾತಿಗೆ ಉತ್ತರಿಸಿದ ದಶಮಂಟಪದ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಆ ಸಂದರ್ಭದಲ್ಲಿ ಯಾರೂ ಕೂಡ ತನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ. ಒಂದು ವೇಳೆ ಸಂಪರ್ಕಿಸಿದಲ್ಲಿ ಪರಿಹಾರ ಲಭಿಸುತ್ತಿತ್ತು ಎಂದು ಸಭೆಗೆ ಸಮಜಾಯಿಶಿಕೆ ನೀಡಿದರು. ಮಧ್ಯೆ ಪ್ರವೇಶಿಸಿ ಮಾತನಾಡಿದ ಕಾವೇರಿ ದಸರಾ ಸಮಿತಿಯ ಖಜಾಂಚಿ ಧ್ಯಾನ್ ಸುಬ್ಬಯ್ಯ,ಡಿಜೆ ಅಳವಡಿಕೆಯಿಂದ ಹಲವು ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇವೆ. ಡಿಜೆಯ ಶಬ್ಧಕ್ಕೆ ಹಲವರಿಗೆ ಸಮಸ್ಯೆಯಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ; ಹೀಗಾಗಿ ಡಿಜೆ ಅಳವಡಿಕೆ ವಿಚಾರವನ್ನು ಈ ಬಾರಿ ಸಂಪೂರ್ಣವಾಗಿ ಕೈ ಬಿಡೋಣ ಎಂದು ವಿಷಯಕ್ಕೆ ತೆರೆ ಎಳೆದರು.

ಕಳೆ ಬಾರಿ ಬಹುಮಾನ ಪಡೆದ ಸ್ನೇಹಿತರ ಬಳಗ ಕೊಪ್ಪ, ಯುವ ದಸರಾ ಸಮಿತಿ ಹಾಗೂ ಅರುವತ್ತೋಕ್ಕಲುವಿನ ಶಾರದಾಂಬ ದಸರಾ ಸಮಿತಿಯ ಮಂಟಪಗಳಿಗೆ ನಗದು ಬಹುಮಾನವನ್ನು ಮಹಾಸಭೆಯಲ್ಲಿ ಅಧ್ಯಕ್ಷ ಹಾಗೂ ದಶಮಂಟಪದ ಅಧ್ಯಕ್ಷರು ವಿತರಿಸಿದರು.

ಮಹಾಸಭೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದಾದೇವಯ್ಯ ಕಳೆದ ಬಾರಿಯ ಮಹಾಸಭೆಯ ವರದಿ ಮಂಡಿಸಿದರು. ಖಜಾಂಚಿ ಧ್ಯಾನ್ ಸುಬ್ಬಯ್ಯ ಲೆಕ್ಕ ಪತ್ರ ಮಂಡಿಸುವ ಮೂಲಕ ಮಹಾಸಭೆಯ ಅನುಮೋದನೆ ಪಡೆದರು. ಸಭೆಯಲ್ಲಿ ಉಪಾಧ್ಯಕ್ಷ ನಾಯಂದರ ಶಿವಾಜಿ, ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ದಿಲನ್ ಚಂಗಪ್ಪ, ಖಜಾಂಚಿ ಧ್ಯಾನ್ ಸುಬ್ಬಯ್ಯ ಉಪಸ್ಥಿತರಿದ್ದರು.

ಸಮಿತಿ ಸದಸ್ಯೆ ಕಾವ್ಯಶ್ರೀ ಪ್ರಾರ್ಥಿಸಿ, ಕಾರ್ಯದರ್ಶಿ ಕಂದಾದೇವಯ್ಯ ಸ್ವಾಗತಿಸಿ, ವಂದಿಸಿದರು. ವಿವಿಧ ಮಂಟಪಗಳ ಅಧ್ಯಕ್ಷರುಗಳು, ಸದಸ್ಯರುಗಳು, ಕಾವೇರಿ ದಸರಾ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್