ಗೋಣಿಕೊಪ್ಪಲು, ಸೆ. ೪: ಕೊಡಗಿನಲ್ಲಿ ವನ್ಯಜೀವಿ ಮಾನವ ಸಂಘರ್ಷದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಈ ಹಿಂದೆಯೇ ಅರಣ್ಯ ಸಚಿವರಿಗೆ ಹಾಗೂ ಮುಖ್ಯಮಂತ್ರಿ ಗಳಿಗೆ ಕೊಡಗಿನ ಆನೆ ಮಾನವ ಸಂಘರ್ಷದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದರೂ ತ್ವರಿತಗತಿಯಲ್ಲಿ ಕೆಲಸ ಆರಂಭಿಸುವAತೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅರಣ್ಯ ಸಚಿವ ಈಶ್ವರ್ಖಂಡ್ರೆ ಬಳಿ ಪ್ರಸ್ತಾವನೆ ಸಲ್ಲಿಸಿದರು.
ಬೆಂಗಳೂರಿನ ಅರಣ್ಯ ಭವನದಲ್ಲಿ ಅರಣ್ಯ ಸಚಿವ ಈಶ್ವರ್ಖಂಡ್ರೆ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರ ಮೊದಲ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಕೇತ್ ಪೂವಯ್ಯ, ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರ ತೋಟಗಳು ನಿರಂತರವಾಗಿ ಹಾಳಾಗುತ್ತಿವೆ. ಕಾಡಾನೆಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಕಾಡಾನೆಗಳು ಬೆಳೆಗಾರರ ಕಾಫಿ ತೋಟದಲ್ಲಿ ನೆಲೆನಿಂತಿವೆ. ಕಾಫಿಯನ್ನೇ ಆಧಾರವಾಗಿಟ್ಟು ಕೊಂಡಿರುವ ರೈತರು ತಮ್ಮ ಕಾಫಿ ತೋಟದಲ್ಲಿ ಕಾಡಾನೆಗಳ ಭಯದಿಂದ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜನವಸತಿ ಪ್ರದೇಶದಲ್ಲಿಯೂ ಕಾಡಾನೆಗಳು ಮಾನವನ ಮೇಲೆ ದಾಳಿ ನಡೆಸಿ ತೊಂದರೆ ನೀಡುತ್ತಿರುವುದಲ್ಲದೆ ಪ್ರಾಣ ಹಾನಿಯೂ ಸಂಭವಿಸುತ್ತಿದೆ. ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಗುರುತಿಸಿ ಅವುಗಳನ್ನು ಸ್ಥಳಾಂತರ ಮಾಡಬೇಕು. ಕಾಫಿ ತೋಟದಲ್ಲಿ ಬೆಳೆ ನಷ್ಟ ಸಂಭವಿಸಿದಾಗ ಸರ್ಕಾರ ನೀಡುವ ಪರಿಹಾರವನ್ನು ಹೆಚ್ಚು ಮಾಡಬೇಕು. ವಿಶೇಷವಾಗಿ ವೀರಾಜಪೇಟೆ ತಾಲೂಕು ಗುಡ್ಡಗಾಡು ಪ್ರದೇಶದಿಂದ ಕೂಡಿರುವುದರಿಂದ ಇಲ್ಲಿನ ಅಧಿಕಾರಿಗಳಿಗೆ ತಕ್ಷಣವೇ ತಲುಪಲು ವಾಹನದ ಸೌಲಭ್ಯಗಳನ್ನು ಈ ಭಾಗಕ್ಕೆ ಆದ್ಯತೆ ಮೇರೆ ಒದಗಿಸಬೇಕು. ಸಿಬ್ಬಂದಿಗಳನ್ನು ಹೆಚ್ಚು ಮಾಡುವುದಲ್ಲದೆ ಅಗತ್ಯ
(ಮೊದಲ ಪುಟದಿಂದ) ಸಲಕರಣೆಗಳನ್ನು ಸಿಬ್ಬಂದಿಗಳಿಗೆ ಒದಗಿಸಬೇಕು ಎಂದು ಮನವಿ ಮಾಡಿದರು.
ಕಳೆದ ೮ ವರ್ಷಗಳಿಂದ ತಿತಿಮತಿ ಬಳಿಯ ನೋಕ್ಯ ಗ್ರಾಮದ ಬಳಿ ಅಳವಡಿಸಿರುವ ರೈಲ್ವೇ ಕಂಬಿ ಕಾರ್ಯ ನೆನೆಗುದಿಗೆ ಬಿದ್ದಿದ್ದು ಇದರ ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳಬೇಕು. ಇದರಿಂದ ಬಹುತೇಕ ಕಾಡಾನೆಗಳ ಸಮಸ್ಯೆಗಳಿಗೆ ಪರಿಹಾರ ಲಭಿಸುವಂತಾಗುತ್ತದೆ ಎಂದು ಅರಣ್ಯ ಸಚಿವರ ಮುಂದೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ದೀಕ್ಷಿತ್ ಹಾಗೂ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ ಅವರು ಈ ಬಗ್ಗೆ ಕೊಡಗು ಜಿಲ್ಲೆಯ ಆನೆ ಮಾನವ ಸಂಘರ್ಷದಲ್ಲಿ ಇಲಾS ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅರಣ್ಯ ಸಚಿವರಿಗೆ ವಿವರ ನೀಡಿದರು.
ಸಭೆಯಲ್ಲಿ ವನ್ಯಜೀವಿ ಆನೆ ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ತರುವಾಯ ರಾಜ್ಯ ಅರಣ್ಯ ಸಚಿವರಾದ ಈಶ್ವರ್ಖಂಡ್ರೆಯವರು ಮುಂದಿನ ಹತ್ತು ದಿನದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ಆಯೋಜಿಸುವ ಮೂಲಕ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರ ಮಾರ್ಗಗಳನ್ನು ಕಂಡುಹಿಡಿಯುವ ಬಗ್ಗೆ ಚರ್ಚಿಸುವ ಕುರಿತು ಸಭೆಗೆ ಭರವಸೆ ನೀಡಿದರು. ಸಭೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ವನ್ಯಜೀವಿ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
- ಹೆಚ್.ಕೆ. ಜಗದೀಶ್