ವೀರಾಜಪೇಟೆ, ಸೆ. ೪: ವೀರಾಜಪೇಟೆ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ದಿನವನ್ನು ತಕ್ಷಣ ಘೋಷಿಸದಿದ್ದರೆ ತಾ.೯ ರಂದು ತಾಲೂಕು ಕಚೇರಿ ಎಂದು ಪ್ರತಿಭಟನೆ ನಡೆಸುವುದಾಗಿ ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಎಚ್ಚರಿಕೆ ನೀಡಿದ್ದಾರೆ.

ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಆಗಸ್ಟ್ ೭ ರಂದು ವೀರಾಜಪೇಟೆ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಮೀಸಲಾತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಧಿಕೃತ ಘೋಷಣಾ ಪತ್ರದೊಂದಿಗೆ ಹೊರಡಿಸಲಾಗಿದೆ. ಮೀಸಲಾತಿ ಘೋಷಣೆಯಾಗಿ ಇಂದಿಗೆ ೨೫ ದಿನ ಕಳೆದರೂ ಅಧಿಕಾರಿಗಳು ವೀರಾಜಪೇಟೆ ಚುನಾವಣೆ ಪ್ರಕ್ರಿಯೆ ನಡೆಸದೆ ವಿಳಂಬ ಮಾಡುತ್ತಿರುವುದು ಆಕ್ಷೇಪಾರ್ಹವಾಗಿದೆ. ಇದರ ಅಧಿಕಾರ ತಾಲೂಕು ತಹಶೀಲ್ದಾರ್ ಅವರಿಗೆ ಇದೆ ಎಂದು ತಿಳಿದ ಹಿನ್ನೆಲೆಯಲ್ಲಿ ತಕ್ಷಣ ವಿಳಂಬ ಮಾಡದೆ ಚುನಾವಣೆ ದಿನ ಘೋಷಣೆ ಮಾಡುವಂತೆ ಅವರನ್ನು ಆಗ್ರಹಿಸಲಾಗಿದೆ ಎಂದರು.

ಸರ್ಕಾರದ ಮೀಸಲಾತಿ ಘೋಷಣೆಯಂತೆ ಹಲವಾರು ಕಡೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಲಾಗಿದೆ. ಆದರೆ ಇಲ್ಲಿ ಮಾತ್ರ ಏಕೆ ವಿಳಂಬ ಮಾಡಲಾಗುತ್ತಿದೆ ಎಂಬ ಕಾರಣ ತಿಳಿಯುತ್ತಿಲ್ಲ. ತಕ್ಷಣ ಚುನಾವಣಾ ದಿನಾಂಕ ಘೋಷಿಸದಿದ್ದರೆ ತಾ. ೯ ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ರಾಮಚಂದ್ರ, ಮನವಿಯನ್ನು ಪಾರದರ್ಶಕವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಟಿ.ಪಿ. ಕೃಷ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್, ಬಿಜೆಪಿಯ ಹಿರಿಯ ಪ್ರಮುಖರಾದ ಪಟ್ರಪಂಡ ರಘುನಾಣಯ್ಯ, ಅನಿಲ್ ಮಂದಣ್ಣ, ಸಂಪಿ ಪೂಣಚ್ಚ, ಕೂತಂಡ ಸಚಿನ್, ಪರಮಶಿವ, ಪಿ.ಜಿ, ಸುಮೇಶ್, ವಕೀಲ ರತ್ನಾಕರ ಶೆಟ್ಟಿ, ಪುರಸಭಾ ಸದಸ್ಯೆ ಸುನೀತಾ, ಸುಶ್ಮಿತಾ, ಆಶಾ ಸುಬ್ಬಯ್ಯ ಮತ್ತಿತರರು ಇದ್ದರು.