ಮುಳ್ಳೂರು, ಸೆ. ೪: ಸಂಘಟನಾ ಶಕ್ತಿಯಿಂದ ಹಳ್ಳಿಗಳು ಅಭಿವೃದ್ಧಿ ಯಾಗಲು ಸಾಧ್ಯವಾಗುತ್ತದೆ ಎಂದು ಅರಕಲಗೂಡು ಶಾಸಕ ಎ. ಮಂಜು ಅಭಿಪ್ರಾಯಪಟ್ಟರು. ಅವರು ಸಮೀಪದ ಕೊಡ್ಲಿಪೇಟೆ ಒಕ್ಕಲಿಗರ ಯುವ ವೇದಿಕೆಯಿಂದ ಕೆರಗನಹಳ್ಳಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ೫೧೫ನೇ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಘಟನಾ ಶಕ್ತಿಯಿಂದ ಹಳ್ಳಿಗಳು ಅಭಿವೃದ್ಧಿಯಾಗುತ್ತವೆ. ಈ ನಿಟ್ಟಿನಲ್ಲಿ ಕೆಂಪೇಗೌಡರು ಬೆಂಗಳೂರು ನಿರ್ಮಿಸುವ ಪರಿಕಲ್ಪನೆಯಲ್ಲಿ ಹಳ್ಳಿಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ ಎಂದು ಹೇಳಿದರು. ಕೆಂಪೇಗೌಡರು ನೀಡಿದಂತಹ ಕೊಡುಗೆಯಿಂದಾಗಿ ಬೆಂಗಳೂರು ವಿಶ್ವವಿಖ್ಯಾತಿಯನ್ನು ಪಡೆದಿದೆ. ಅಂದಿನ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿಗೆ ಶ್ರಮಪಟ್ಟಂತಹ ಕೆಂಪೇಗೌಡರ ಮಾರ್ಗದರ್ಶನ ಇಂದಿನ ಯುಪೀಳಿಗೆಗೆ ಅಗತ್ಯ ಇದೆ, ಅವರ ತತ್ವಗಳನ್ನು ಯುವಶಕ್ತಿ ಬಳಸಿಕೊಂಡು ಸಂಘಟನೆ ಮೂಲಕ ಸಮರ್ಥ ನಾಯಕರನ್ನು ನಿರ್ಮಿಸುವ ಶಕ್ತಿ ಯುವ ಸಮುದಾಯದವರ ಮೇಲಿದೆ, ಕೆಂಪೇಗೌಡರ ಶ್ರಮಕ್ಕೆ ನಾವು ಸದಾ ಋಣಿಯಾಗಿರಬೇಕೆಂದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕೆಂಪೇಗೌಡರ ಆದರ್ಶವನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚAಗಪ್ಪ ಮಾತನಾಡಿ, ಕೊಡಗಿನ ಜನರು ಒಗ್ಗಟ್ಟಿನಿಂದ ಕೆಂಪೇಗೌಡರ ಜಯಂತಿ ಆಚರಣೆ ಮಾಡಬೇಕಿದೆ. ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರು ನಿರ್ಮಾಣ ಮಾಡಿದ್ದರು ಅದರ ಫಲವಾಗಿ ಇಂದು ಕೊಡಗಿನ ಜನತೆ ಬೆಂಗಳೂರಿನಲ್ಲಿ ನೆಲಸಿ ಅವರ ಜೀವನವನ್ನು ಕಂಡುಕೊAಡಿದ್ದಾರೆ ಎಂದ ಅವರು ಕೆಂಪೇಗೌಡರ ಆದರ್ಶ ಮತ್ತು ಮಾರ್ಗದರ್ಶನದಂತೆ ಹೋದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಎ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಮಾಜ ಸೇವಕ ಬಾಚಳ್ಳಿ ಪ್ರತಾಪ್ ಗೌಡ, ನಿವೃತ್ತ ಸೈನಿಕ ಮಣಿಗನಹಳ್ಳಿ ರಂಗನಾಥ್, ಸೋಮವಾರಪೇಟೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕೊಡ್ಲಿಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗರೀಶ್ ಮಲ್ಲಪ್ಪ, ಪ್ರಮುಖರಾದ ತೇಜಕುಮಾರ್, ಅರುಣ್ ಕಾಳಪ್ಪ, ಕೆ.ಎನ್. ಮಂಜುನಾಥ್, ಎಂ.ಎಲ್. ಗೌತಮ್, ಕೊಡ್ಲಿಪೇಟೆ ಭಗವಾನ್ ಮುಂತಾದವರು ಹಾಜರಿದ್ದರು.