ನಾಪೋಕ್ಲು, ಸೆ. ೪: ಮೈಸೂರಿನ ಕೊಡಗು ಗೌಡ ಸಮಾಜದ ವತಿ ಯಿಂದ ಭಾನುವಾರ ಕೈಲು ಮುಹೂರ್ತ ಪ್ರಯುಕ್ತ ಜನಾಂಗ ಬಂಧುಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಮೈಸೂರಿನ ವಿಶ್ವ ವಿದ್ಯಾಲಯ ಕ್ರೀಡಾ ಮೈದಾನದಲ್ಲಿ ಆಯೋಜಿಸ ಲಾದ ಕ್ರೀಡಾಕೂಟವನ್ನು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಅವರು ಬಲೂನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.

ಬಳಿಕ ನಡೆದ ಕ್ರೀಡಾಕೂಟದಲ್ಲಿ ೫ ವರ್ಷದ ಮಕ್ಕಳಿಂದ ಹಿಡಿದು ೭೦ ವರ್ಷ ವಯಸ್ಸಿನ, ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಎರಡು ಸ್ಪರ್ಧೆಗಳಂತೆ ಒಟ್ಟು ೪೦ ಸ್ಪರ್ಧೆಗಳು ನಡೆದವು. ಕ್ರೀಡಾಕೂಟದ ಭಾಗವಾಗಿ ಪುರುಷರು ಮತ್ತು ಮಹಿಳೆಯರಿಗೆ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ, ಅಲ್ಲದೆ ಕ್ರಿಕೆಟ್ ಪಂದ್ಯಾಟಗಳನ್ನೂ ನಡೆಸಲಾಯಿತು.

ವೇದಿಕೆಯಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಕ್ರೀಡಾ ಸಂಚಾಲಕ ಕೊಂಬಾರನ ಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ, ಅಲ್ಲದೆ ಸಮಾಜದ ಪದಾಧಿಕಾರಿಗಳು, ನಿರ್ದೇಶಕರು ಭಾಗವಹಿಸಿದ್ದರು. ಸಮಾಜದ ಕಾರ್ಯದರ್ಶಿ ಪೋನ್ನೇಟಿ ನಂದ ಸ್ವಾಗತಿಸಿದರೆ, ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಸೆಪ್ಟೆAಬರ್ ೭ ರಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸೆಪ್ಟೆಂಬರ್ ೮ ರಂದು ಸಮಾರೋಪ ಸಮಾರಂಭ ಇದ್ದು, ಅಂದು ಸಾಧಕರಿಗೆ ಸನ್ಮಾನ ಸೇರಿದಂತೆ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು.