ವೀರಾಜಪೇಟೆ, ಸೆ. ೫: ಪಟ್ಟಣದಲ್ಲಿ ಐತಿಹಾಸಿಕವಾಗಿ ನಡೆದುಕೊಂಡು ಬರುತ್ತಿರುವ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ವೀರಾಜಪೇಟೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತ ಸಮೂಹ ತಾ.೭ ರಂದು ಪ್ರಥಮ ಪೂಜಿತನ ಪ್ರತಿಷ್ಠಾಪನೆಗೆ ವೇದಿಕೆ ಹಾಗೂ ಮನೆಗಳನ್ನು ಶುಚಿಗೊಳಿಸಿ ಗಣಪತಿಯನ್ನು ಬರಮಾಡಿ ಕೊಳ್ಳುವುದಕ್ಕೆ ಸಜ್ಜಾಗುತ್ತಿದೆ.
ಗೌರಿ ಗಣೇಶ ಹಬ್ಬಕ್ಕೆ ಹೆಸರುವಾಸಿಯಾದ ವೀರಾಜಪೇಟೆ ಪಟ್ಟಣದಲ್ಲಿ ಪೆಂಡಾಲ್ಗಳ ನಿರ್ಮಾಣದೊಂದಿಗೆ ಆಕರ್ಷಕ ಲೈಟಿಂಗ್ಸ್ ಅಳವಡಿಸಲಾಗಿದೆ. ಸಿದ್ಧತೆ ಬಲು ಜೋರಾಗಿದ್ದು, ಪಟ್ಟಣ ನವ ವಧುವಿನಂತೆ ಶೃಂಗಾರಗೊಳ್ಳುತ್ತಿದೆ.
ಪಿಒಪಿ ಮೂರ್ತಿಯನ್ನು ಸರಕಾರ ನಿಷೇಧಪಡಿಸಿದ್ದರಿಂದ ಹಾಗೂ ಸಾರ್ವಜನಿಕರಲ್ಲೂ ಸಹ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿದ್ದರ ಪರಿಣಾಮ ಇದೀಗ ಸಾರ್ವಜನಿಕ ಪ್ರತಿಷ್ಠಾಪನ ಮಂಡಳಿಗಳು ಸೇರಿದಂತೆ ಮನೆಗಳಲ್ಲಿಯೂ ಸಹ ಪರಿಸರಸ್ನೇಹಿ ಗಣಪತಿ ಪ್ರತಿಷ್ಠಾಪನೆಗೆ ಭಕ್ತರು ಮುಂದಾಗಿದ್ದಾರೆ.
ಭಾದ್ರಪದ ಶುದ್ದ ಚತುರ್ಥಿ ದಿನದಂದು ಆರಂಭವಾಗುವ ಉತ್ಸವವು ಅನಂತ ಪದ್ಮನಾಭ ವೃತದಂದು ಸಾಮೂಹಿಕವಾಗಿ ವಿದ್ಯುತ್ ಅಲಂಕೃತ ಮಂಟಪಗಳು ಶೋಭಾಯತ್ರೆಯಲ್ಲಿ ಸಾಗಿ ವಿಸರ್ಜನೆಗೊಳ್ಳುತ್ತದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾಡಿನೆಲ್ಲೆಡೆಯಿಂದ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ.
ನಗರದ ರಾಜ ಬೀದಿ ಎಂದು ಖ್ಯಾತಿ ಪಡೆದ ಮುಖ್ಯ ಬೀದಿಯ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಗೌರಮ್ಮ ದೇವಿಯ ಪಲ್ಲಕ್ಕಿ ಉತ್ಸವ ತಾ.೬ರಂದು ನಗರದ ಎಲ್ಲೆಡೆ ಸಂಚರಿಸಿ ಭಕ್ತರಿಂದ ಪೂಜೆಗಳನ್ನು ಸ್ವೀಕರಿಸಿ ದೇವಾಲಯಕ್ಕೆ ಆಗಮನವಾಗಿ ಉತ್ಸವ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುತ್ತದೆ.
ತಾ.೭ರಂದು ನಗರಕ್ಕೆ ಕಳಸ ಪ್ರಾಯದಂತಿರುವ ಶ್ರೀ ವiಹಾಗಣಪತಿ ದೇವಾಲಯದಲ್ಲಿ ಲಂಭೋದರನ ಉತ್ಸವ ಮೂರ್ತಿಯು ಪ್ರತಿಪ್ಠಾಪನೆಗೊಂಡ ಬಳಿಕ ಸಿಡಿಮದ್ದು ಸಿಡಿಸಿ ತಿಳಿಸುತ್ತಾರೆ, ನಂತರದಲ್ಲಿ ಇತರ ಸ್ಥಳಗಳಲ್ಲಿ ಗಜಾನನ ಉತ್ಸವ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುವುದು ವಾಡಿಕೆಯಾಗಿದೆ.
ನಗರದ ೨೨ ಸ್ಥಳಗಳಲ್ಲಿ ವಿಘ್ನವಿನಾಯಕನ ವಿವಿಧ ಭಂಗಿಗಳಲ್ಲಿರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ, ನಗರದ ಆಯ್ದ ಸಮಿತಿಗಳು ೧೧ ದಿನಗಳ ಕಾಲ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ಬಾರಿ ಆಯಾಯ ಸಮಿತಿಗಳ ಅನುಕೂಲಕ್ಕೆ ತಕ್ಕಂತೆ ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ. ಇನ್ನುಳಿದಂತೆ ಪ್ರತಿದಿನ ವಿಶೇಷ ಪೂಜೆ ಪುನಷ್ಕಾರಗಳು ಸರಳವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ಅನಂತಪದ್ಮನಾಭ ವೃತದಂದು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಯ ಮೂಲಕ ಮುಖ್ಯ ಬೀದಿಗಾಗಿ ಸಾಗಿ ಅಂದು ಮುಂಜಾನೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.