ಕೊಡ್ಲಿಪೇಟೆ,ಸೆ.೫: ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ನೀರುಗುಂದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಸಹಯೋಗದೊಂದಿಗೆ ನೀರುಗುಂದ ವೀರಭದ್ರೇಶ್ವರ ದೇವಾಲಯದಲ್ಲಿ ೬ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜನ್ಮ ವರ್ಧಂತಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಿರಿಕೊಡ್ಲಿ ಮಠಾಧ್ಯಕ್ಷÀ ಸದಾಶಿವ ಸ್ವಾಮೀಜಿ, ಮನುಕುಲಕ್ಕೆ ನೈತಿಕತೆಯ ಪಾಠ ಮಾಡಿ ಸತ್ಯ-ಶುದ್ಧ, ಸನ್ನಡತೆಯ ಸಾತ್ವಿಕ ಬದುಕಿನ ಸಂಸ್ಕಾರ ನೀಡಿದ ಚೈತನ್ಯ ಶಕ್ತಿ. ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಧರ್ಮ ಮಾರ್ಗದಲ್ಲಿ ಕೈಹಿಡಿದು ಮುನ್ನಡೆಸಿದ ಮಹಾನುಭಾವನೇ ವೀರಭದ್ರ ಎಂದರು.
ಭಾದ್ರಪದ ಮಾಸದ ಮೊದಲ ಮಂಗಳವಾರದAದು ಪ್ರತಿ ವರ್ಷ ಶ್ರೀ ಸ್ವಾಮಿಯ ಜಯಂತಿ ಆಚರಿಸಲಾಗುತ್ತಿದೆ. ಮಾನವನ ಇಹದ ಬದುಕಿನ ಸ್ತರಗಳಲ್ಲಿ ಇರಬಹುದಾದ ಜನವಿರೋಧಿ ಕೃತ್ಯಗಳ ನಿವಾರಣೆಗೆ ಶ್ರೀವೀರಭದ್ರ ದೇವರ ಮಹಾಶಕ್ತಿ ಸಂಚಯವು ನಿರಂತರ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಿಸಿದರು.
ವರ್ಧಂತಿ ಮಹೋತ್ಸವ ಅಂಗವಾಗಿ ದೇವಾಲಯದಲ್ಲಿ ಮಹಾರುದ್ರಾಬಿಷೇಕ, ಫಲ - ಪುಷ್ಪ ನೈವೇದ್ಯ, ಅಷ್ಟೋತ್ತರ ಪೂಜೆ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕ ಮಣಿಕಂಠ ಹಾಗು ಚಂದ್ರಯ್ಯ ಅವರುಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು.
ನೀರುಗುಂದ ಗ್ರಾಮದ ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಮಿತಿ ಸದಸ್ಯರು ಹಾಗೂ ಗ್ರಾಮದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.