ಶನಿವಾರಸಂತೆ, ಸೆ.೫: ಪಟ್ಟಣದ ಕಾವೇರಿ ರಸ್ತೆಯು ತ್ಯಾಜ್ಯ ವಿಲೇವಾರಿ ರಸ್ತೆಯಾಗಿ ಪರಿವರ್ತಿತವಾಗಿದ್ದು ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ತಿರುವಿನಿಂದ ಯಶಸ್ವಿ ಥಿಯೇಟರ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲೂ ಅಲ್ಲಲ್ಲಿ ಕಸದ ರಾಶಿ ರಾರಾಜಿಸುತ್ತಿದೆ.ಕೊಳೆತು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿ ತಿರುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾವೇರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ದೇವರಾಜ್, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ರಸ್ತೆಯ ಎಡ ಬದಿಯ ಚರಂಡಿ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಸೇರಿದ್ದರೆ ಪೂರ್ತಿ ರಸ್ತೆ ಹಾಗೂ ಮತ್ತೊಂದು ಬಲ ಬದಿಯ ಚರಂಡಿ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿದೆ.ಚರಂಡಿ ವ್ಯವಸ್ಥೆ ಸರಿಯಾಗಿಲ್ಲ.ರಸ್ತೆ ದುರಸ್ತಿ ಭಾಗ್ಯ ಕಂಡಿಲ್ಲ.ದುAಡಳ್ಳಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು ತ್ಯಾಜ್ಯ ಸಂಗ್ರಹಿಸಿ ಸಾಗಿಸಲು ಟ್ರ‍್ಯಾಕ್ಟರ್ ಸೌಲಭ್ಯವಿದ್ದರೂ ಜನರು ತ್ಯಾಜ್ಯ ತಂದು ಕಾವೇರಿ ರಸ್ತೆ ಬದಿ ಎಸೆದು ಹೋಗುತ್ತಿದ್ದಾರೆ.ಪುರಾತನ ಮಕ್ಕಳ ಕಟ್ಟೆ ಕೆರೆಯಂತೂ ಮತ್ತೊಂದು ತ್ಯಾಜ್ಯ ವಿಲೇವಾರಿ ಘಟಕವಾಗಿ ಪರಿವರ್ತಿತಗೊಳ್ಳುತ್ತಿದೆ.ಕಾವೇರಿ ರಸ್ತೆಯ ತ್ಯಾಜ್ಯದ ಬಗ್ಗೆಯಾಗಲೀ ರಸ್ತೆ ದುರಸ್ತಿ ಬಗ್ಗೆಯಾಗಲಿ ಎರಡು ಗ್ರಾಮ ಪಂಚಾಯಿತಿಯವರು ಗಮನ ಹರಿಸುತ್ತಿಲ್ಲ.
ಕಾವೇರಿ ರಸ್ತೆಯಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜು ಇದ್ದು ಮುಂಭಾಗದ ರಸ್ತೆಯಲ್ಲೂ ಕಸದ ರಾಶಿ ತಂದು ಸುರಿಯಲಾಗುತ್ತಿದೆ.ನಿತ್ಯವೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಇತರೆ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ವಾಯು ವಿಹಾರಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ.
ದುAಡಳ್ಳಿ ಗ್ರಾಮ ಪಂಚಾಯಿತಿಯವರು ಶೀಘ್ರ ಕಾವೇರಿ ರಸ್ತೆಯ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.ಎರಡೂ ಗ್ರಾಮ ಪಂಚಾಯಿತಿಯವರು ತ್ಯಾಜ್ಯ ಹಾಕುವವರನ್ನು ಗುರುತಿಸಿ ದಂಡ ವಿಧಿಸಿ ಸಮಸ್ಯೆಯನ್ನು ಬಗೆಹರಿಸಬೇಕು.ಸಂಬAಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕು ಎಂದು ಕಾವೇರಿ ಕಾಲೇಜು ಪ್ರಾಂಶುಪಾಲ ಎಚ್.ಎನ್.ದೇವರಾಜ್, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಪ್ರತಿಕ್ರ‍್ರಯಿಸಿ, ರಸ್ತೆಯ ಒಂದು ಬದಿಯ ಚರಂಡಿ ಮಾತ್ರ ಶನಿವಾರಸಂತೆ ಪಂಚಾಯಿತಿಗೆ ಸೇರುತ್ತದೆ.ಶೀಘ್ರದಲ್ಲೇ ಚರಂಡಿ ಬದಿಯ ತ್ಯಾಜ್ಯ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.ರಸ್ತೆಯ ಜಂಕ್ಷನ್ ಗಳಲ್ಲಿ ಹಾಗೂ ಮಕ್ಕಳ ಕಟ್ಟೆ ಕೆರೆ ಬಳಿ ಸಿಸಿ ಕ್ಯಾಮರಾ ಅಳವಡಿಸಿ, ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.