ಸೋಮವಾರಪೇಟೆ, ಸೆ.೫: ಕೃಷಿ ಮಾಡಿಕೊಂಡಿರುವ ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಒಳಪಡಿಸುವ ಸರ್ಕಾರದ ಕ್ರಮದ ವಿರುದ್ಧ, ಭಾರತೀಯ ಜನತಾ ಪಾರ್ಟಿಯಿಂದ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಮಾಜೀ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಕ್ಷಣವೇ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರನ್ನು ಬಿಜೆಪಿಯಿಂದ ನೇಮಿಸಿ, ಸಿ ಮತ್ತು ಡಿ ವರ್ಗದ ಜಮೀನನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲು ಸರ್ಕಾರ ಮುಂದಾಗಿರುವ ಕ್ರಮದ ವಿರುದ್ಧ ಪ್ರಶ್ನಿಸಲಾಗುವುದು ಎಂದರು.

ಕಳೆದ ೧೭.೦೫.೨೦೨೪ರ ಆದೇಶದಲ್ಲಿ ಸಿ ಮತ್ತು ಡಿ ಜಮೀನನ್ನು ಮೀಸಲು ಅರಣ್ಯವೆಂದು ಘೋಷಿಸಲು ಕರ್ನಾಟಕ ಸರ್ಕಾರ ರೇಣುಕಾಂಬ ಎಂಬವರನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಯನ್ನಾಗಿ ನೇಮಿಸಿದೆ. ಈ ಅಧಿಕಾರಿ ಆದೇಶಗಳನ್ನು ಹೊರಡಿಸುತ್ತಿದ್ದು, ಈಗಾಗಲೇ ಗ್ರಾ.ಪಂ.ಗಳಿAದ ಮಾಹಿತಿ ಪಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದ ಸಂದರ್ಭ ಸರ್ಕಾರಿ ಜಮೀನಿನಲ್ಲಿ ಕಾಫಿ ಕೃಷಿ ಮಾಡಿದ್ದರೆ ೩೦ ವರ್ಷಗಳವರೆಗೆ ಲೀಸ್‌ಗೆ ನೀಡಲು ಆದೇಶ ಮಾಡಲಾಗಿತ್ತು ಎಂದರು.

ಈಗಿನ ಸರ್ಕಾರ ವ್ಯತಿರಿಕ್ತವಾಗಿ ಹೊಸದಾಗಿ ಮೀಸಲು ಅರಣ್ಯ ಘೋಷಿಸಲು ಹೊರಟಿರುವುದು ಖಂಡನೀಯ. ಸಿ ಮತ್ತು ಡಿ ಜಮೀನನ್ನು ಲ್ಯಾಂಡ್ ಬ್ಯಾಂಕ್‌ಗೆ ಹಸ್ತಾಂತರಿಸುವ ಸಂದರ್ಭವೇ ಯಾವುದೇ ಸಮಯದಲ್ಲೂ ಮರಳಿ ಕಂದಾಯ ಇಲಾಖೆಗೆ ಪಡೆಯುವ ನಿಬಂಧನೆ ವಿಧಿಸಲಾಗಿತ್ತು. ಇದನ್ನೆಲ್ಲಾ ಗಾಳಿಗೆ ತೂರಿ ಯಾರ ಗಮನಕ್ಕೂ ತಾರದೇ ಸಿ ಮತ್ತು ಡಿ ವರ್ಗದ ಜಮೀನನ್ನು ಅರಣ್ಯಕ್ಕೆ ನೀಡಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ರಂಜನ್ ಹೇಳಿದರು.

ಕಾನೂನು ಭಾಗದ ಹೋರಾಟದ ಬಗ್ಗೆ ಬಿಜೆಪಿ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ವಕೀಲರಾದ ಎಂ.ಬಿ. ಅಭಿಮನ್ಯುಕುಮಾರ್, ಗಣಪತಿ, ಕೃಷ್ಣಕುಮಾರ್, ಬಿ.ಜೆ. ದೀಪಕ್, ಹೊಸಬೀಡು ಪವನ್, ಪ್ರಮುಖರಾದ ಎಸ್.ಆರ್. ಸೋಮೇಶ್, ಶರತ್ ಚಂದ್ರ ಅವರುಗಳು ಉಪಸ್ಥಿತರಿದ್ದರು.