ಟಿ ಹೆಚ್.ಜೆ. ರಾಕೇಶ್
ಮಡಿಕೇರಿ, ಸೆ. ೫: ಜನಮನ ಸೆಳೆಯುವ, ವಿಶ್ವವಿಖ್ಯಾತಿಗೆ ಪಾತ್ರವಾಗಿರುವ ಮಡಿಕೇರಿ ದಸರಾಕ್ಕೆ ದಿನಗಣನೆ ಆರಂಭಗೊAಡಿದೆ. ಆದರೆ, ಯಾವುದೇ ಪೂರ್ವ ತಯಾರಿಯೂ ಇದುವರೆಗೂ ನಡೆಯದ ಹಿನ್ನೆಲೆ ಆಚರಣೆ ಹೇಗೆ ಎಂಬ ಬಗ್ಗೆ ಆತಂಕ ಉಂಟಾಗಿದೆ.
ಈ ಬಾರಿ ಅಕ್ಟೋಬರ್ ೩ ರಂದು ನಾಡಹಬ್ಬ ದಸರಾಕ್ಕೆ ಮುನ್ನುಡಿ ಇಡಲಾಗುವುದು. ಇಡೀ ನಾಡು ದಸರಾವನ್ನು ಸಂಭ್ರಮದಿAದ ಬರ ಮಾಡಿಕೊಂಡು ೯ ದಿನಗಳ ವೈವಿಧ್ಯಮಯ ಆಚರಣೆಯೊಂದಿಗೆ ದೇವಿಯ ಆರಾಧನೆ ಮೂಲಕ ಭಕ್ತಗಣ ಸಂಪ್ರದಾಯ ಬದ್ಧವಾಗಿ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಮೈಸೂರಿನಲ್ಲಿ ನಡೆಯುವ ಸಂಭ್ರಮಾಚರಣೆ ದಸರಾಕ್ಕೆ ಮತ್ತೊಂದು ಕಳೆ ನೀಡುತ್ತದೆ. ಅದೇ ರೀತಿ ಮಡಿಕೇರಿಯಲ್ಲಿ ನಡೆಯುವ ವೈಭವದ ದಸರಾ ತನ್ನದೇ ಆದ ಇತಿಹಾಸ ಹೊಂದಿದೆ. ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವದೊಂದಿಗೆ ಚಾಲನೆ ದೊರೆಯುವ ಮಡಿಕೇರಿ ದಸರಾ ಕೇವಲ ಹಬ್ಬಕ್ಕೆ ಸೀಮಿತವಾಗದೆ ಜನೋತ್ಸವವಾಗಿ ಆಚರಣೆಯಾಗುತ್ತಿದೆ.
ಜಾತಿ, ಧರ್ಮ, ಬೇಧ-ಭಾವವಿಲ್ಲದ ಮಡಿಕೇರಿ ದಸರಾದಲ್ಲಿ ಜನತೆ ಭಾಗವಹಿಸುತ್ತದೆ. ನವರಾತ್ರಿಗಳ ಕಾಲ ನಡೆಯುವ ಸಾಂಸ್ಕೃತಿಕ ಕಲರವ, ಜೊತೆಗೆ ಯುವ ದಸರಾ, ಜನಪದೋತ್ಸವ, ಮಕ್ಕಳಾ, ಮಹಿಳಾ ದಸರಾ, ಕವಿಗೋಷ್ಠಿ, ಕ್ರೀಡೆ ಹೀಗೆ ಹತ್ತಾರು ಕಾರ್ಯಕ್ರಮದೊಂದಿಗೆ ದಶಮಂಟಪ ಶೋಭಾಯಾತ್ರೆಯ ವೈಭವದೊಂದಿಗೆ ದಸರಾಕ್ಕೆ ತೆರೆ ಎಳೆಯಲಾಗುತ್ತದೆ.
(ಮೊದಲ ಪುಟದಿಂದ) ಬೆಳಿಗ್ಗೆ ಮೈಸೂರು ದಸರಾದ ಜಂಬೂ ಸವಾರಿ ಕಣ್ತುಂಬಿಕೊಳ್ಳುವAತೆ ದಸರಾದ ಕೊನೆ ದಿನ ರಾತ್ರಿ ಮಡಿಕೇರಿಯಲ್ಲಿ ನಡೆಯುವ ದಶಮಂಟಪ ಶೋಭಾಯಾತ್ರೆಗೆ ಜಿಲ್ಲೆ ಮಾತ್ರವಲ್ಲದೆ ಬೇರೆ ರಾಜ್ಯ, ದೇಶಗಳಿಂದ ಲಕ್ಷಾಂತರ ಸಂಖ್ಯೆಯ ಜನರು ಹರಿದು ಬರುತ್ತಾರೆ.
ಇಷ್ಟೆಲ್ಲ ವಿಶೇಷತೆಯಿಂದ ಕೂಡಿರುವ ಮಡಿಕೇರಿ ದಸರಾ ಆಚರಣೆಗೆÀ ಇನ್ನೂ ಯಾವುದೇ ಪೂರ್ವ ತಯಾರಿ ನಡೆಸುತ್ತಿರುವುದು ಕಂಡು ಬರುತ್ತಿಲ್ಲ. ಇದರಿಂದ ಆಚರಣೆ ಹೇಗೆ? ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.
ನಗರಸಭೆ ೨ನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಶ್ನಿಸಿ ತಡೆಯಾಜ್ಞೆ ತಂದಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನ ಖಾಲಿ ಇದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಅವಧಿಯ ಉಪಸಮಿತಿಗಳ ಪದಾಧಿಕಾರಿಗಳೇ ಈ ಬಾರಿಯೂ ಮುಂದುವರೆಯಲಿದ್ದು, ದಶಮಂಟಪ ಸಮಿತಿಗೆ ಮಾತ್ರ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯುವ ದಸರಾ ಸಮಿತಿಗೆ ಇನ್ನಷ್ಟೆ ಆಯ್ಕೆ ನಡೆಯಬೇಕಾಗಿದೆ.
ಅನುದಾನ - ಸ್ಪಷ್ಟತೆ ಇಲ್ಲ
ಮಡಿಕೇರಿ ದಸರಾಕ್ಕೆ ಪ್ರತಿ ವರ್ಷ ಅನುದಾನ ವಿಚಾರ ಸಮಸ್ಯೆಯಾಗಿ ಕಾಡುತ್ತದೆ. ನಿರೀಕ್ಷಿತ ಅನುದಾನ ಲಭ್ಯವಾಗದೆ ಕೊನೆಘಳಿಗೆಯಲ್ಲಿ ಕಾರ್ಯಕ್ರಮ ರೂಪುರೇಷೆ ಬದಲಾವಣೆಗೊಂಡ ಘಟನಾವಳಿಗಳು ಈ ಹಿಂದೆ ನಡೆದಿವೆ. ಹೀಗಿದ್ದರು ಈ ಬಾರಿಯೂ ದಸರಾ ಸಮಿತಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ, ಸಂಬAಧಪಟ್ಟ ಸಚಿವರನ್ನು ದಸರಾ ಸಮಿತಿಯ ನಿಯೋಗ ಭೇಟಿಯಾಗಿ ಅನುದಾನದ ಬಗ್ಗೆ ಗಮನ ಸೆಳೆಯುವ ಪ್ರಯತ್ನಗಳು ನಡೆದಿಲ್ಲ. ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನಡೆಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ಜಿಲ್ಲೆಯ ೨ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಇರುವ ಕಾರಣ ಅನುದಾನ ತರುವ ಬಗ್ಗೆ ವಿಶೇಷ ಆಸಕ್ತಿ ಈಗಾಗಲೇ ತೋರಿ ಪ್ರಕ್ರಿಯೆ ಗರಿಗೆದರಬೇಕಾಗಿತ್ತು. ಆದರೆ, ಶಾಸಕರ ನೇತೃತ್ವದಲ್ಲಿ ಸಭೆಯೂ ಇದುವರೆಗೆ ನಡೆದಿಲ್ಲ. ಇದರಿಂದ ದಸರಾಕ್ಕೆ ಅನುದಾನ ಎಷ್ಟು ಬಿಡುಗಡೆಗೊಳ್ಳುತ್ತದೆ? ದಶಮಂಟಪಗಳಿಗೆ ಹಣ ಎಷ್ಟು ಮೀಸಲಿಡಬಹುದು? ವಿವಿಧ ಉಪಸಮಿತಿಗಳ ಅನುದಾನ ಹಂಚಿಕೆ ಹೇಗೆ? ಎಂಬ ಹಲವು ಪ್ರಶ್ನೆಗಳು ಮುಂದಿವೆ. ಇನ್ನಾದರೂ ಸಮಿತಿ ಈ ನಿಟ್ಟಿನ ಪ್ರಯತ್ನಕ್ಕೆ ಮುಂದಾಗಬೇಕಾಗಿದೆ.
ಅನುಮೋದನೆಗೊಳ್ಳದ ಲೆಕ್ಕಪತ್ರ
ಕಳೆದ ದಸರಾ ಆಚರಣೆಯ ಲೆಕ್ಕಪತ್ರಕ್ಕೆ ಅನುಮೋದನೆ ದೊರೆಯದ ಕಾರಣ ಮುಂದಿನ ಪ್ರಕ್ರಿಯೆ ನಡೆಸಲು ನಿರಾಸಕ್ತಿ ಮೂಡಿದೆಯೇ? ಎಂಬ ಪ್ರಶ್ನೆ ಜನವಲಯವನ್ನು ಕಾಡುತ್ತಿದೆ.
ಆಗಸ್ಟ್ ೨೩ ರಂದು ನಡೆದ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಹಲವರಿಂದ ಲೆಕ್ಕಪತ್ರ ಕುರಿತು ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಸಭೆ ಮುಂದೂಡಲ್ಪಟ್ಟಿತ್ತು. ೫-೬ ದಿನಗಳಲ್ಲಿ ಆಡಿಟ್ ವರದಿ ನೀಡಿ ಸಭೆ ಕರೆಯಲಾಗುತ್ತದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ತಿಳಿಸಿದ್ದರು. ಆದರೆ, ಸಭೆ ನಡೆದು ೧೨ ದಿನ ಕಳೆದರೂ ಇದುವರೆಗೂ ಮತ್ತೊಂದು ಸಭೆ ನಡೆಸಲು ದಸರಾ ಸಮಿತಿಗೆ ಸಾಧ್ಯವಾಗಿಲ್ಲ. ಪರಿಣಾಮ ಇಂದಿಗೂ ಲೆಕ್ಕಪತ್ರಕ್ಕೆ ಅನುಮೋದನೆ ದೊರೆಯದೆ ಮುಂದಿನ ಕೆಲಸಗಳಿಗೆ ಅಡಿಯಿಡಲು ಸಾಧ್ಯವಾಗುತ್ತಿಲ್ಲ.
ತಯಾರಾಗದÀ ಬಜೆಟ್
ಒಂದೆಡೆ ಕಳೆದ ದಸರಾ ಲೆಕ್ಕಪತ್ರಕ್ಕೆ ಅನುಮೋದನೆ ದೊರೆತ್ತಿಲ್ಲ. ಮತ್ತೊಂದು ಕಡೆ ಮುಂದಿನ ದಸರಾದ ರೂಪುರೇಷೆ ಸಂಬAಧ ಕಾರ್ಯಚಟುವಟಿಕೆಗಳಾಗಲಿ, ಅಂದಾಜು ಮೊತ್ತದ ಬಜೆಟ್ ತಯಾರಿಕೆಗೂ ಸಮಿತಿ ಮುಂದಾಗದ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಈ ವೇಳೆಗೆ ದಸರಾ ಪೂರ್ವ ತಯಾರಿ ನಡೆದು ಬಜೆಟ್ ಸಿದ್ಧಪಡಿಸುವ ಕೆಲಸವಾಗಬೇಕಾಗಿತ್ತು. ಆದರೆ, ಇದ್ಯಾವುದೇ ಪ್ರಕ್ರಿಯೆಗಳು ನಡೆಯದೆ ಸಮಿತಿ ಮೌನವಹಿಸಿರುವ ಕಾರಣ ಆಚರಣೆ ಸ್ಪಷ್ಟತೆ ಕಳೆದುಕೊಂಡಿದೆ.
‘ಯುದ್ಧ ಕಾಲೇ ಶಸ್ತಾçಭ್ಯಾಸ' ಎಂಬAತೆ ಕೊನೆಘಳಿಗೆಯಲ್ಲಿ ಪ್ರಯತ್ನಗಳು ನಡೆಸುವುದರಿಂದ ವ್ಯವಸ್ಥಿತ ಆಚರಣೆಗೆ ತೊಂದರೆಯಾಗುತ್ತದೆ ಎಂದು ದಸರಾ ಸಮಿತಿಯಲ್ಲಿ ದುಡಿಯುವವರ ಕೊರಗಾಗಿದೆ. ಕನಿಷ್ಟ ದಸರಾ ಸಮಿತಿ ಕಚೇರಿಯನ್ನು ಆರಂಭಗೊಳಿಸದಿರುವುದು ನಿರಾಸಕ್ತಿಗೆ ಹಿಡಿದ ಕೈಗನ್ನಡಿ ಎನ್ನಬಹುದಾಗಿದೆ.
ಗೊಂದಲದಲ್ಲಿ ಉಪಸಮಿತಿಗಳು
ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ದಸರಾ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಉಪಸಮಿತಿಗಳು ಗೊಂದಲದಲ್ಲಿವೆ.
ಪ್ರಮುಖವಾಗಿ ಸಾಂಸ್ಕೃತಿಕ, ಕವಿಗೋಷ್ಠಿ, ಕ್ರೀಡಾ, ಯುವ ದಸರಾ ಸಮಿತಿಗಳು, ದಶಮಂಟಪ, ಕರಗ ಸಮಿತಿಗಳಿಗೆ ಹೆಚ್ಚಿನ ಅನುದಾನ ಬೇಕಿರುತ್ತದೆ. ಆದರೆ, ಪ್ರಸ್ತುತ ಬೆಳವಣಿಗೆಯಿಂದ ಉಪಸಮಿತಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಇವೆಲ್ಲ ಗೊಂದಲದ ನಡುವೆಯೂ ಸಾಂಸ್ಕೃತಿಕ ಸಮಿತಿ ಈಗಾಗಲೇ ಕಲಾ ತಂಡಗಳಿAದ ಅರ್ಜಿ ಆಹ್ವಾನಿಸಿದೆ. ದಶಮಂಟಪ, ಕರಗ ಸಮಿತಿ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸುತ್ತಿದೆ. ಮಂಟಪ ಸಮಿತಿಗಳು ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದು, ಸರಕಾರದ ಅನುದಾನದ ಬಗ್ಗೆ ಸ್ಪಷ್ಟ ಮಾಹಿತಿ ದೊರೆತ್ತಲ್ಲಿ ಸಹಕಾರಿಯಾಗಲಿದೆ. ಇದರೊಂದಿಗೆ ನಗರದ ರಸ್ತೆಗಳ ದುರಸ್ತಿ, ಪ್ರಮುಖ ಬೀದಿಗಳ ಅಲಂಕಾರ, ಮೂಲಭೂತ ಸೌಲಭ್ಯಗಳ ವ್ಯವಸ್ಥೆಗಳನ್ನು ಮಾಡಬೇಕಾದ ಹೊಣೆಗಾರಿಕೆಯೂ ಸಮಿತಿಯದ್ದಾಗಿದೆ.