ಮಡಿಕೇರಿ, ಸೆ. ೫: ಜಿಲ್ಲೆಯ ಗಡಿಭಾಗದಲ್ಲಿ ನಕಲಿ ಬಂದೂಕು ತಯಾರಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೀಗ ಮಾರಾಟವಾಗಿರುವ ಬಂದೂಕು ಹಾಗೂ ಖರೀದಿ ಮಾಡಿರುವವರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಈಗಾಗಲೇ ಆರು ಬಂದೂಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಗಡಿಗ್ರಾಮ ಎಂದು ಹೇಳಲಾಗುವ ಸಣ್ಣಪುಲಿಕೋಟು ಗ್ರಾಮದಲ್ಲಿ ನಕಲಿ ಬಂದೂಕು ತಯಾರಿ ಮಾಡುವುದಲ್ಲದೆ ಅದನ್ನು ಕೊಡಗು ಮತ್ತು ಕೇರಳ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವರಿತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದ ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ಹಾಗೂ ತಂಡದವರು ಕಳೆದ ಆಗಸ್ಟ್ ೧೫ರಂದು ಎರಡು ನಕಲಿ ಬಂದೂಕು ಹಾಗೂ ಒಂದು ಪಿಸ್ತೂಲ್ ಸಹಿತ ನಾಲ್ವರನ್ನು ಬಂದಿಸಿದ್ದರು. ಕಳೆದ ಹದಿನೈದು ವರ್ಷಗಳಿಂದ ಸಣ್ಣಪುಲಿಕೋಟಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿಕೊಂಡು ಕತ್ತಿ ತಯಾರಿ ಹಾಗೂ ದುರಸ್ತಿ ಮಾಡಿಕೊಂಡಿರುವ ಕೇರಳದ ಇಡುಕ್ಕಿ ಜಿಲ್ಲೆಯ ಸುರೇಶ್ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಆತನಿಂದ ಬಂದೂಕು ಖರೀದಿಸಿದ್ದ ಇತರ ಮೂವರನ್ನು ಬಂದಿಸಲಾಗಿತ್ತು.

ಮತ್ತೆ ನಾಲ್ಕು ಕೋವಿ ವಶಕ್ಕೆ..!

ಅದಾದ ಬಳಿಕ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮತ್ತೊಂದು ಕೋವಿ ಸಿಕ್ಕಿದೆ. ಕರಿಕೆ ಗ್ರಾಮದ ದಿನೇಶ ಎಂಬಾತ ಬಂದೂಕು ಖರೀದಿಸಿರುವ ಬಗ್ಗೆ ಸುಳಿವು ಸಿಕ್ಕ ಮೇರೆಗೆ ಆತನನ್ನು ಬಂದಿಸಿ ಕೋವಿ ವಶಪಡಿಸಿಕೊಂಡಿದ್ದರು. ಅದಲ್ಲದೆ ಕಟ್ಟೆಕೋಡಿ ಗ್ರಾಮದಲ್ಲಿ ಕಳ್ಳಬೇಟೆಗಾಗಿ ಬಳಸಲಾಗಿದ್ದ ಮೂರು ನಕಲಿ ಬಂದೂಕುಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಬಂದೂಕುಗಳನ್ನು ಖರೀದಿ ಮಾಡಿದವರಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವರನ್ನು ಪ್ರತಿನಿತ್ಯ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಮಡಿಕೇರಿಯಲ್ಲೂ ವಿಚಾರಣೆ..!

ಈ ಪ್ರಕರಣಕ್ಕೆ ಸಂಬAಧಿಸಿದAತೆ ಭಾಗಮಂಡಲ ಪೊಲೀಸರು ತನಿಖೆ ಮುಂದುವರಿಸಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸೆರೆಸಿಕ್ಕ ಆರೋಪಿಗಳು ನೀಡಿರುವ ಮಾಹಿತಿ ಆಧಾರದಲ್ಲಿ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಕರಿಕೆ ಚೆತ್ತುಕಾಯ ನಿವಾಸಿ ರಾಮಚಂದ್ರ ಎಂಬವರ ಬಳಿ ಕೋವಿ ಇದೆ ಎಂಬ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರನ್ನು ಕರಿಕೆ ಉಪಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದಾಗಿ ತಿಳಿದು ಬಂದಿದೆ. ಇದರೊಂದಿಗೆ ಪ್ರಮುಖ ಆರೋಪಿ ಸುರೇಶ್‌ನನ್ನು ಖರೀದಿದಾರರಿಗೆ ಪರಿಚಯ ಮಾಡಿಕೊಟ್ಟ ಆರೋಪದ ಮೇರೆಗೆ ಪ್ರಭಾಕರ್ ಹಾಗೂ ಗಣೇಶ್ ಎಂಬವರುಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದಾಗಿ ತಿಳಿದು ಬಂದಿದೆ.

ನಕಲಿ ಬಂದೂಕು ತಯಾರಿ ಹಾಗೂ ಮಾರಾಟ ಮಾಡಿರುವ ಪ್ರಕರಣದ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದ್ದು, ಪೊಲೀಸರು ತನಿಖೆಯಲ್ಲಿ ಮಗ್ನರಾಗಿದ್ದಾರೆ..!

? ಸಂತೋಷ್