ವೀರಾಜಪೇಟೆ, ಸೆ. ೫: ಸಮಾಜ ಸೇವೆಯನ್ನೇ ದ್ಯೇಯವಾಗಿಟ್ಟಿರುವ ಮದರ್ ಥೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿಯು ಶ್ಲಾಘನೀಯವಾಗಿದೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಜೇಮ್ಸ್ ಡೊಮಿನಿಕ್ ಅವರು ಅಭಿಪ್ರಾಯಪಟ್ಟರು. ಅವರು ವೀರಾಜಪೇಟೆಯ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಮದರ್ ಥೆರೇಸಾ ಅವರ ಜನ್ಮ ದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಹಿರಿಯರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಹಿರಿಯರು ಮಕ್ಕಳಲ್ಲಿ ವಿಶ್ವಾಸವನ್ನು ತುಂಬಬೇಕು. ಪ್ರೀತಿಯನ್ನು ಪರಸ್ಪರ ಹಂಚಬೇಕು ಎಂದರು. ಮದರ್ ಥೆರೇಸಾ ಸೇವಾ ಕೇಂದ್ರದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಸಂಘಕ್ಕೆ ಸಂಪೂರ್ಣ ಸಹಕಾರವನ್ನು ಸದಾ ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಅವರು ಮಾತನಾಡಿ ಮದರ್ ಥೆರೇಸಾ ಸೇವಾ ಕೇಂದ್ರದ ಸದಸ್ಯರು ಹಿರಿಯರಿಗೆ ಎಲ್ಲಾ ರೀತಿಯಲ್ಲಿಯೂ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಸೇವೆಯಲ್ಲಿ ತೊಡಗಿಸುವುದರಿಂದ ಆತ್ಮತೃಪ್ತಿ ದೊರಕುತ್ತದೆ. ಮಾತ್ರವಲ್ಲದೆ ದೇವರ ಆಶೀರ್ವಾದವು ಲಭಿಸುತ್ತದೆ ಎಂದು ಹೇಳಿದರು. ಹಿರಿಯರು ಮಕ್ಕಳಿಗಾಗಿ ಪ್ರಾರ್ಥಿಸಿ ಎಂದು ಕರೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮದರ್ ಥೆರೇಸಾ ಸೇವಾ ಕೇಂದ್ರದ ಅಧ್ಯಕ್ಷರಾದ ಪೆರಿಗ್ರಿನ್ ಮಚ್ಚಾಡೋ ಅವರು ಮಾತನಾಡಿ ಎರಡು ವರ್ಷಗಳ ಹಿಂದೆ ಆರಂಭವಾದ ಈ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸೇವಾ ಮನೋಭಾವನೆಯ ಜೊತೆಗೆ ಪ್ರಾರ್ಥನೆಯು ಅತ್ಯಂತ ಮುಖ್ಯವಾದುದಾಗಿದೆ ಎಂದರು.

ಈ ಸಂದರ್ಭದಲ್ಲಿ ೭೫ ವರ್ಷ ಮೇಲ್ಪಟ್ಟ ೫೦ ಕ್ಕೂ ಅಧಿಕ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಧರ್ಮಗುರುಗಳಾದ ಫಾ. ಜೇಮ್ಸ್ ಡೊಮಿನಿಕ್, ಫಾ. ಮದಲೈ ಮುತ್ತು ಹಾಗೂ ಉಪನ್ಯಾಸಕ, ಬಿ. ಎನ್. ಶಾಂತಿಭೂಷಣ್ ಅವರನ್ನು ಸನ್ಮಾನಿಸಲಾಯಿತು. ಒಟ್ಟು ಆರು ಜನರಿಗೆ ಆರೋಗ್ಯ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಯಿತು. ಹಾಗೂ ವಿನಿಷಾ ಡಿಸೋಜಾ ಅವರಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಂಘದ ವತಿಯಿಂದ ಸ್ಕಾಲರ್ ಶಿಪ್ ನೀಡಲಾಯಿತು. ಈ ಸಂದರ್ಭ ಹಿರಿಯ ನಾಗರಿಕರಿಗೆ ಮನೋರಂಜನಾ ಕ್ರೀಡೆಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಟ್ರಸ್ಟಿಗಳಾದ ಲವೀನಾ, ಚೋಪಿ ಜೋಸೆಫ್, ಜೋಕಿಮ್ ರಾಡ್ರಿಗಸ್, ಮಾರ್ಟೀನ್ ಬರ್ನಾಡ್, ಮರ್ವಿನ್ ಲೋಬೋ, ಜಾನಿ ಮೆನೇಜೆಸ್, ಹಾಗೂ ಜೇಮ್ಸ್ ಮೆನೇಜೆಸ್ ರವರು ಉಪಸ್ಥಿತರಿದ್ದರು. ಫ್ಲೋರ ಡಿಸೋಜಾ ಮತ್ತು ಪ್ರೆಸಿಲ್ಲ ಅವರು ಪ್ರಾರ್ಥಿಸಿ, ಚಾರ್ಲ್ಸ್ ಡಿಸೋಜಾ ಅವರು ಸ್ವಾಗತಿಸಿ, ಪಾಯಿಲೇಟ್ ಡಿಸೋಜ ಅವರು ನಿರೂಪಿಸಿ, ಬೆನಡಿಕ್ಟ್ ಸಾಲ್ಡಾನ್ಹಾ ಅವರು ವಂದಿಸಿದರು. ಈ ಸಂದರ್ಭ ಸಾರ್ವಜನಿಕರು, ಧರ್ಮ ಕೇಂದ್ರದ ಭಕ್ತಾದಿಗಳು ಉಪಸ್ಥಿತರಿದ್ದರು.