ವೀರಾಜಪೇಟೆ, ಸೆ. ೫: ಪಟ್ಟಣದಲ್ಲಿ ನಡೆಯುವ ಗಣೇಶೋತ್ಸವ ಮತ್ತು ಈದ್ ಮೀಲಾದ್ ಹಬ್ಬಗಳ ಪ್ರಯುಕ್ತ ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ವಿವಿಧ ಧರ್ಮಗಳ ಮುಖಂಡರ ಶಾಂತಿ ಸಭೆಯನ್ನು ನಡೆಸಲಾಯಿತು.

ವೀರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ಆರಕ್ಷಕ ಇಲಾಖೆಯಿಂದ ನಗರದ ಪೊಲೀಸು ಠಾಣೆಯ ಅವರಣದಲ್ಲಿ ವಿವಿಧ ಧರ್ಮಗಳ ಮುಖಂಡರುಗಳ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರು ಹಬ್ಬವನ್ನು ಅಚರಿಸಲು ಇಲಾಖೆಯು ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ. ಕಾನೂನುಗಳನ್ನು ಮೀರಿ ನಡೆದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಶೋಭಾಯಾತ್ರೆಯಲ್ಲಿ ತೆರಳುವ ಮಂಟಪ ಸಮಿತಿಗಳು ಅಬ್ಬರದ ಸಂಗೀತ (ಡಿ.ಜೆ.) ಬಳಸುವಂತಿಲ್ಲ. ಉಚ್ಚ ನ್ಯಾಯಾಲಯದ ಅದೇಶವನ್ನು ಸರ್ವರೂ ಪರಿಪಾಲನೆ ಮಾಡಬೇಕು. ತಾ. ೧೭ ರಂದು ನಡೆಯುವ ಶೋಭಾಯಾತ್ರೆಯ ವೇಳೆಯಲ್ಲಿ ನಗರದಲ್ಲಿ ಎಲ್ಲಾ ವಾಹನಗಳಿಗೆ ನಿಲುಗಡೆ ನಿಷೇಧ ಮಾಡಲಾಗಿರುತ್ತದೆ. ತಾ. ೧೬ ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.

ವೀರಾಜಪೇಟೆ ಉಪ ವಿಭಾಗ ಪೊಲೀಸು ಅಧೀಕ್ಷಕ ಮೋಹನ್ ಕುಮಾರ್ ಅವರು ಮಾತನಾಡಿ ಉತ್ಸವ ಸಮಿತಿಗಳು ಅಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ ಇಲಾಖೆಯಿಂದ ಒದಗಿಸಲಾಗುತ್ತದೆ. ಜನಸ್ನೇಹಿ ಉತ್ಸವ ಆಚರಣೆಗೆ ಸರ್ವರೂ ಕೈಜೋಡಿಸುವಂತೆ ಮನವಿ ಮಾಡಿದರು.

ವೀರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ಪ್ರಮೋದ್ ಕುಮಾರ್, ನಗರ ಮತ್ತು ಗ್ರಾಮಾಂತರ ಪೊಲೀಸು ಠಾಣೆಗಳ ಸಿಬ್ಬಂದಿಗಳು ಸೇರಿದಂತೆ, ವಿವಿಧ ಧರ್ಮಗಳ ಪ್ರಮುಖರು , ಉತ್ಸವ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಶಾಂತಿ ಸಭೆಯಲ್ಲಿ ಹಾಜರಿದ್ದರು.