ಸೋಮವಾರಪೇಟೆ, ಸೆ. ೬ : ಸರ್ಕಾರಿ ಜಮೀನನ್ನು ಅನೇಕ ದಶಕಗಳಿಂದ ಒತ್ತುವರಿ ಮಾಡಿಕೊಂಡು ಕೃಷಿ ಮೂಲಕ ಜೀವನ ಕಂಡುಕೊAಡಿರುವ ರೈತರ ಒತ್ತುವರಿ ತೆರವಿಗೆ ಮುಂದಾದರೆ ಉಗ್ರ ಹೋರಾಟ ಸಂಘಟಿಸಲಾಗುವುದು ಎಂದು ಸೋಮವಾರಪೇಟೆ ರೈತ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರು, ರಾಜ್ಯದ ಕಂದಾಯ ಹಾಗೂ ಅರಣ್ಯ ಇಲಾಖಾ ಸಚಿವರು ಒತ್ತುವರಿ ತೆರವಿನ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ ರೈತಾಪಿ ವರ್ಗದಲ್ಲಿ ಆತಂಕ ಮನೆ ಮಾಡಿದೆ. ಜನಪ್ರತಿನಿಧಿಗಳು ರೈತರ ಪರವಾಗಿ ನಿಲ್ಲಬೇಕಿದೆ. ಒಂದು ವೇಳೆ ರೈತರು ಕೃಷಿ ಮಾಡಿರುವ ಜಮೀನುಗಳ ತೆರವು ಕಾರ್ಯಾಚರಣೆ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರದ ಆದೇಶಗಳಿಂದಾಗಿ ರೈತರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಶಾಸಕ ಮಂತರ್ ಗೌಡ ಅವರ ಗಮನ ಸೆಳೆದಿದ್ದು, ಎರಡು ದಿನದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಕಂದಾಯ ಹಾಗೂ ಅರಣ್ಯ ಇಲಾಖಾ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಸಮಿತಿಯ ಸಂಚಾಲಕ ಬಗ್ಗನ ಅನಿಲ್‌ಕುಮಾರ್ ಮಾತನಾಡಿ, ರೈತರ ಕೃಷಿ ಭೂಮಿ ಒತ್ತುವರಿ ತೆರವಿಗೂ ಮೊದಲು ಸರ್ಕಾರಿ ಜಾಗದಲ್ಲಿ ವಾಣಿಜ್ಯ ಕಟ್ಟಡಗಳು, ರೆಸಾರ್ಟ್ಗಳು, ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಪಿಡಿಓ, ಗ್ರಾ.ಪಂ. ಆಡಳಿತ, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಿ;ಈ ಧೈರ್ಯ ಸಚಿವರುಗಳಿಗೆ ಇದೆಯೇ? ಎಂದು ಪ್ರಶ್ನಿಸಿದರು.

ಸಿ ಮತ್ತು ಡಿ ವರ್ಗದ ಜಮೀನೆಂದು ಗುರುತಿಸಿರುವ ಜಾಗದಲ್ಲಿ ಕೃಷಿ ಕೈಗೊಳ್ಳಲಾಗಿದೆ. ಕೂತಿ ಗ್ರಾಮದಲ್ಲಿ ೧೦೦೦ ಏಕರೆ ಸಿ ಮತ್ತು ಡಿ ಜಾಗವೆಂದು ತಿಳಿಸಲಾಗಿದೆ. ಆದರೆ ಈ ಜಾಗ ಎಲ್ಲಿದೆ, ಸರ್ವೆ ನಂಬರ್ ಯಾವುದು? ಇಂದಿನ ಸ್ಥಿತಿಗತಿಗಳೇನು? ಎಂಬ ಬಗ್ಗೆ ಯಾವುದೇ ಪರಿಶೀಲನೆ ನಡೆಸಿಲ್ಲ. ಒಟ್ಟಾರೆಯಾಗಿ ಕಚೇರಿಯಲ್ಲಿ ಕುಳಿತು ದಾಖಲೆಗಳನ್ನು ಬದಲಾಯಿಸಲಾಗಿದೆ ಎಂದರು.

೧೯೭೬ರಲ್ಲಿಯೇ ಸರ್ಕಾರ ಸಿ ಮತ್ತು ಡಿ ಜಾಗ ಗುರುತಿಸಲು ಅಧಿಕಾರಿಗಳು ಸೂಚನೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸದೇ ಅಧಿಕಾರಿಗಳು ಮನಸೋಯಿಚ್ಛೆ ವರದಿ ತಯಾರಿಸಿದ್ದಾರೆ. ಸಿ ಮತ್ತು ಡಿ ಜಾಗ ಎಂದರೆ ಏನೆಂದು ಅರ್ಥ ಮಾಡಿಕೊಳ್ಳದ ಅಧಿಕಾರಿಗಳಿಂದ ಇದೀಗ ಸಮಸ್ಯೆ ಬಿಗಡಾಯಿಸಿದೆ. ೧೯೭೭ರಲ್ಲಿ ಈ ಜಾಗವನ್ನು ಅರಣ್ಯಕ್ಕೆ ಸೇರಿಸುವ ಬಗ್ಗೆ ಅದೇಶ ಬಂದಿದ್ದು, ನಂತರ ೧೯೯೧ರಲ್ಲಿ ಕಂದಾಯ ಇಲಾಖೆಗೆ ವಾಪಸ್ ಪಡೆಯಲಾಗಿದೆ. ಈ ಜಾಗಕ್ಕೆ ೫೦ ಮತ್ತು ೫೩ ರಡಿ ಅರ್ಜಿ ಆಹ್ವಾನಿಸಿ ಹಕ್ಕುಪತ್ರ ನೀಡಲು ಆದೇಶ ಮಾಡಲಾಗಿದೆ ಎಂದರು.

ಕಳೆದ ಸಾಲಿನ ಸರ್ಕಾರ ಈ ಜಾಗವನ್ನು ೩೦ ವರ್ಷಕ್ಕೆ ಲೀಸ್‌ಗೆ ನೀಡುವ ಬಗ್ಗೆಯೂ ಆದೇಶ ಮಾಡಿದೆ. ಈ ಎಲ್ಲಾ ಆದೇಶಗಳಿದ್ದರೂ ಸಹ ಇದೀಗ ಒತ್ತುವರಿ ತೆರವಿಗೆ ಸಚಿವರುಗಳು ಹೇಳಿಕೆ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ವಾಸ್ತವಾಂಶ ಅರಿವು, ಸರ್ವೆ ನಡೆಸಿ, ಕೃಷಿ ಯೋಗ್ಯ ಅಥವಾ ಕೃಷಿಗೆ ಅಯೋಗ್ಯ ಭೂಮಿಯೆಂದು ವರ್ಗೀಕರಿಸುವ ಕೆಲಸ ಆಗಬೇಕಿದೆ ಎಂದು ಗೋಷ್ಠಿಯಲ್ಲಿದ್ದ ಸಮಿತಿಯ ಬಿ.ಜೆ. ದೀಪಕ್ ಹೇಳಿದರು. ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ನಂದಕುಮಾರ್, ತ್ರಿಶೂಲ್ ಅವರುಗಳು ಉಪಸ್ಥಿತರಿದ್ದರು.