ಮಡಿಕೇರಿ, ಸೆ. ೧೦: ಜಿಲ್ಲೆಯಲ್ಲಿ ಕಳೆದ ಕೆಲವಾರು ದಿನಗಳಿಂದ ಮಳೆಯ ಸನ್ನಿವೇಶ ಇದೆ. ಸೆಪ್ಟೆಂಬರ್ ೨ನೇ ವಾರ ಕಳೆಯುತ್ತಾ ಬರುತ್ತಿದ್ದರೂ ಮಳೆಗಾಲದ ಚಿತ್ರಣದಿಂದ ಕೊಡಗು ಇನ್ನೂ ಹೊರತಾಗಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಲೇ ಇದ್ದು, ಬಿಸಿಲಿನ ವಾತಾವರಣ ಇನ್ನೂ ಬಂದಿಲ್ಲ. ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಹಲವೆಡೆಗಳಲ್ಲಿ ಮಳೆಯ ರಭಸವೂ ಹೆಚ್ಚಿದೆ. ಶನಿವಾರದಿಂದಲೇ ಮಳೆ ಮತ್ತೆ ಒಂದಷ್ಟು ಬಿರುಸು ತೋರುತ್ತಿದೆ. ನಡುನಡುವೆ ವಿರಾಮ ಕಂಡುಬAದರೂ ಆಗಾಗ್ಗೆ ಮಳೆ ಸುರಿಯುತ್ತಿರುವದರೊಂದಿಗೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವೇ ಮುಂದುವರಿಯುತ್ತಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ೧.೧೦ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೮೩ ಇಂಚು, ವೀರಾಜಪೇಟೆ ೦.೮೩, ಪೊನ್ನಂಪೇಟೆ ೧.೧೩, ಸೋಮವಾರಪೇಟೆ ೧ ಇಂಚು ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೫೨ ಇಂಚು ಸರಾಸರಿ ಮಳೆಯಾಗಿದೆ.
ಈತನಕ ೧೦೮.೫೦ ಇಂಚು
ಕೊಡಗು ಜಿಲ್ಲೆಗೆ ಪ್ರಸಕ್ತ ವರ್ಷ ಜನವರಿಯಿಂದ ಈತನಕ ಸರಾಸರಿ ೧೦೮.೫೦ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ ೫೫.೨೧ ಇಂಚು ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಜನವರಿಯಿಂದ ಈತನಕ ೧೫೭.೧೨ ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ಈ ಅವಧಿಯಲ್ಲಿ ಸರಾಸರಿ ೯೪.೮೦ ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ೯೬.೯೩ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೪೨.೯೧ ಇಂಚು ಮಳೆಯಾಗಿತ್ತು. ಪೊನ್ನಂಪೇಟೆ ತಾಲೂಕಿನಲ್ಲಿ ಈ ಬಾರಿ ಸರಾಸರಿ ೧೦೦.೦೯ ಇಂಚು, ಸೋಮವಾರಪೇಟೆ ೧೨೨.೬೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೬೪.೮೬ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಪೊನ್ನಂಪೇಟೆ ೪೬.೯೬, ಸೋಮವಾರಪೇಟೆ ೫೭.೯೬ ಹಾಗೂ ಕುಶಾಲನಗರದಲ್ಲಿ ೩೩.೪೦ ಇಂಚು ಮಾತ್ರ ಮಳೆಯಾಗಿತ್ತು.