ವೀರಾಜಪೇಟೆ, ಸೆ. ೧೦: ಇತಿಹಾಸ ಪ್ರಸಿದ್ಧ ವೀರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ೧೦ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೀರಾಜಪೇಟೆ ಹಿರಿಯ ವಕೀಲ ಹಾಗೂ ಮಾಜಿ ಪುರಸಭಾಧ್ಯಕ್ಷರಾದ ಎಂ.ಕೆ.ಪೂವಯ್ಯ ಅವರು ಉದ್ಘಾಟನೆ ನೆರವೇರಿಸಿ ಚಾಲನೆ ನೀಡಿದರು.
ಇದೇ ಸಂದರ್ಭ ಮಾತನಾಡಿದ ಅವರು, ದಿ.ಎನ್. ವೆಂಕಟೇಶ ಕಾಮತ್ ಅವರು ವೀರಾಜಪೇಟೆಯ ಗೌರಿ ಗಣೇಶ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಕಾರಣಕರ್ತರು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ವೀರಾಜಪೇಟೆಯ ಜನತೆಗೆ ಮನರಂಜನೆ ಹಾಗೂ ಶ್ರದ್ಧಾಭಕ್ತಿಯೊಂದಿಗೆ ಉತ್ಸವ ಆಚರಿಸಲು ಕಾರಣವಾಗಿದೆ ಎಂದು ಹೇಳಿದರು.
ವೀರಾಜಪೇಟೆ ವಕೀಲರ ಸಂಘದ ಕಾರ್ಯದರ್ಶಿ ವಿ.ಜಿ. ರಾಕೇಶ್ ಮಾತನಾಡಿ, ವೀರಾಜಪೇಟೆ ಗೌರಿ ಗಣೇಶೋತ್ಸವ ಆಚರಣೆಗೆ ಶತಮಾನಗಳ ಇತಿಹಾಸವಿದೆ. ದೊಡ್ಡ ವೀರರಾಜೇಂದ್ರ ವೀರಾಜಪೇಟೆ ಪಟ್ಟಣವನ್ನು ನಿರ್ಮಾಣ ಮಾಡಿದ ಸಂದರ್ಭ ಬಸವೇಶ್ವರ ದೇಗುಲವನ್ನೂ ನಿರ್ಮಾಣ ಮಾಡಿದ್ದು, ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಕಾರ್ಯಕ್ರಮಗಳು ಜನಮನ್ನಣೆಗೆ ಪಾತ್ರವಾಗಿವೆ ಎಂದರು.
ವೀರಾಜಪೇಟೆ ಪುರಸಭಾ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರಿನ ಸಿರಿ ಸಂಭ್ರಮ ಕಲಾ ತಂಡದ ಶಶಿರಾಜ್ ರಾವ್ ಕಾವೂರು, ಮೈಮ್ ರಾಮ್ ದಾಸ್, ದೇವಸ್ಥಾನ ಖಜಾಂಚಿ ಜೆ.ಎನ್. ಪುಷ್ಪರಾಜ್ ಉಪಸ್ಥಿತರಿದ್ದರು.
ಸಂಚಾಲಕರಾದ ಹೈಕೋರ್ಟ್ ಹಿರಿಯ ವಕೀಲರಾದ ರವೀಂದ್ರನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಂಗಳೂರು ತಂಡದಿAದ ಜರುಗಿದ ತತ್ವಪದ, ರಂಗಗೀತೆ, ಜಾನಪದ ಗೀತೆ, ಮಿಮಿಕ್ರಿ ಹಾಗೂ ಹಾಸ್ಯ ಪ್ರಹಸನ ಉತ್ತಮವಾಗಿ ಮೂಡಿ ಬಂತು.
ತಾ.೯ ರಂದು ರಾತ್ರಿ ವಾಯ್ಸ್ ಆಫ್ ಮೈಸೂರು ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಮುಖ್ಯಸ್ಥರಾದ ಎಂ.ಬಿ.ಪ್ರಕಾಶ್ ಅವರನ್ನು ಶ್ರೀ ಬಸವೇಶ್ವರ ದೇವಸ್ಥಾನ ಉಪಾಧ್ಯಕ್ಷ ಜೆ.ಎನ್. ಸಂಪತ್ ಕುಮಾರ್ ಹಾಗೂ ಪುರಸಭಾ ಸದಸ್ಯ ಎಸ್.ಎಚ್. ಮತೀನ್ ಸನ್ಮಾನಿಸಿ ಗೌರವಿಸಿದರು.
ದೇವಸ್ಥಾನದಲ್ಲಿ ತಾ.೧೭ರವರೆಗೆ ಮಧ್ಯಾಹ್ನ ಹಾಗೂ ರಾತ್ರಿ ೭.೩೦ ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಇರುವುದಾಗಿ ರವೀಂದ್ರನಾಥ್ ಕಾಮತ್ ತಿಳಿಸಿದ್ದಾರೆ.