ಮಡಿಕೇರಿ, ಸೆ. ೧೦: ಆ್ಯಂಬ್ಯುಲೆನ್ಸ್ ಹಾಗೂ ಸರಕಾರಿ ಬಸ್ ನಡುವೆ ಮುಖಾಮುಖಿ ಅಪಘಾತವಾದ ಘಟನೆ ಮಡಿಕೇರಿ - ಮೂರ್ನಾಡು ರಸ್ತೆ ನಡುವಿನ ಮೇಕೇರಿ ಬಳಿ ನಡೆದಿದೆ.
ಗೋಣಿಕೊಪ್ಪದಿಂದ ಮಡಿಕೇರಿ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆತರುತ್ತಿದ್ದ ಆ್ಯಂಬ್ಯುಲೆನ್ಸ್ ಹಾಗೂ ಮಡಿಕೇರಿಯಿಂದ ಪೂಕೊಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್ ನಡುವೆ ಮುಖಾಮುಖಿ ಅಪಘಾತವಾಗಿದ್ದು, ಅದೃಷ್ಟವಶಾತ್ ೨ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ್ಯಂಬ್ಯುಲೆನ್ಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರೋಗಿಯನ್ನು ತಕ್ಷಣ ಮತ್ತೊಂದು ಆ್ಯಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತದಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ತಕ್ಷಣ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.