ಗೋಣಿಕೊಪ್ಪಲು, ಸೆ. ೧೦: ಸಮಾಜದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು.ಕೊಡಗಿನ ಆಚಾರ ವಿಚಾರ,ಪದ್ದತಿ, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ.ಸಮಾಜ ಬಾಂಧವರ ಮೇಲಿದೆ ಆ ನಿಟ್ಟಿನಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬಗಳನ್ನು ಯಶಸ್ವಿಯಾಗಿ ಆಚರಿಸುವಂತಾಗಬೇಕು ಎಂದು ಕಾಫಿ ಬೆಳೆಗಾರ, ಸವಿತಾ ಸಮಾಜದ ಮಾಜಿ ಅಧ್ಯಕ್ಷ ವೇದಪಂಡ ಕಿರಣ್ ಸಮಾಜ ಬಾಂಧವರಿಗೆ ಕರೆ ನೀಡಿದರು.

ಇದೇ ಮೊದಲ ಬಾರಿಗೆ ಗೋಣಿಕೊಪ್ಪ ಸಮೀಪದ ಕೈಕೇರಿ ಸವಿತಾ ಸಮಾಜದ ಸಭಾಂಗಣದಲ್ಲಿ ಕೊಡವ ಭಾಷಿಕ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೈಲ್‌ಪೊಳ್ದ್ ನಮ್ಮೆರ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇವರು, ಕೊಡಗಿನಲ್ಲಿ ಮೂಲ ನಿವಾಸಿಗಳು ತಮ್ಮ ಪದ್ದತಿ ಪರಂಪರೆಯನ್ನು ಉಳಿಸುವತ್ತ ಹೆಚ್ಚಿನ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಸವಿತಾ ಸಮಾಜವು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸಂಪ್ರದಾಯಗಳನ್ನು ಪಾಲಿಸುವ ಕೆಲಸ ನಿರ್ವಹಿಸುತ್ತಿದೆ.ಸಮಾಜ ಬಾಂಧವರು ವಾರ್ಷಿಕವಾಗಿ ಒಂದೆಡೆ ಸೇರುವ ಪ್ರಯತ್ನ ನಡೆದಿರುವುದು ಶ್ಲಾಘನೀಯ ಎಂದರು.

ಸಮಾಜದ ಅಧ್ಯಕ್ಷರಾದ ತಾಪನೇರ ಸಾಬು ಅಧ್ಯಕ್ಷತೆಯಲ್ಲಿ ಜರುಗಿದ ಕೈಲ್‌ಪೊಳ್ದ್ ನಮ್ಮೆರ ಒತ್ತೋರ್ಮೆ ಕೂಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಿರ್ದೇಶಕ, ಮಾಜಿ ಸವಿತಾ ಸಮಾಜದ ನಿರ್ದೇಶಕ ನಾಯಿಂದರ ಶಿವಾಜಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಕಾಡೆಮಿಯಲ್ಲಿ ಸಮುದಾಯಕ್ಕೆ ನಿರ್ದೇಶಕ ಸ್ಥಾನ ಲಭಿಸಿರುವುದು ಶ್ಲಾಘನೀಯ ಹಲವು ದಶಕಗಳಿಂದ ವಂಚಿತರಾಗಿದ್ದೆವು. ಇದೀಗ ಉತ್ತಮ ಅವಕಾಶ ಲಭಿಸಿರುವುದರಿಂದ ಸಮಾಜದ ಏಳಿಗೆಗೆ ಅಕಾಡೆಮಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಈಗಾಗಲೇ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸವಿತಾ ಸಮಾಜದ ಐನ್ ಮನೆಗಳ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಸಮಾಜದ ಅಭಿವೃದ್ದಿಗಾಗಿ ನೀಡುವ ವಿಶ್ವಾಸವಿದೆ ಎಂದರು.

ಅಧ್ಯಕ್ಷರಾದ ತಾಪನೇರ ಸಾಬು ಚದುರಿ ಹೋಗಿರುವ ಸವಿತಾ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನ ಆರಂಭಗೊAಡಿದೆ. ಹೊರ ಜಿಲ್ಲೆಯಲ್ಲಿರುವ ಸಮಾಜ ಬಾಂಧವರು ಕೈಲ್‌ಪೊಳ್ದ್ ನಮ್ಮೆಯ ಅಂಗವಾಗಿ ಒಂದೆಡೆ ಸೇರುವ ಪ್ರಯತ್ನ ನಡೆದಿರುವುದು ಶ್ಲಾಘನೀಯ, ಸಮಾಜದ ಗಣ್ಯರನ್ನು ಗುರುತಿಸಿ ಗೌರವಿಸುವ ಕೆಲಸ ನಿರಂತರವಾಗಿ ಸಾಗಲಿದೆ ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಹಲಚ್ಚಿರ ದೇವಯ್ಯ, ನಿರ್ದೇಶಕರುಗಳಾದ ಹೊನ್ನೆಪಂಡ ಮನು,ಪೂಣಚೀರ ಮನೋಜ್, ವೇದಪಂಡ ಬಿದ್ದಪ್ಪ, ಚೋಂದುವAಡ ಬೇಬಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಪೂಣಚೀರ ಸುಮನ್ ಮನೋಜ್ ನಿರೂಪಿಸಿ ಗಾನ ಮತ್ತು ತಂಡ ಪ್ರಾರ್ಥಿಸಿ ತಾಪನೇರ ಸುಷ್ಮಿ ಸ್ವಾಗತಿಸಿ ಹಲಚ್ಚೀರ ರೋನಿಷ ದೇವಯ್ಯ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಪೈಪೋಟಿಗಳು ನಡೆದವು. ಮೆರವಣಿಗೆಯ ಮೂಲಕ ತೆರಳಿ ಸಮೀಪದ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ಪೂಜೆ ಸಲ್ಲಿಕೆಯ ನಂತರ ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಮಕ್ಕಳು, ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಯುವತಿಯರು ನಡೆಸಿಕೊಟ್ಟ ಉಮ್ಮತ್ತಾಟ್ ಕಾರ್ಯಕ್ರಮವು ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಿರ್ದೇಶಕ, ಮಾಜಿ ಸವಿತಾ ಸಮಾಜದ ನಿರ್ದೇಶಕ ನಾಯಿಂದರ ಶಿವಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಭಾಗದಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.