ಮಡಿಕೇರಿ, ಸೆ. ೧೦: ಸಂಕಷ್ಟ, ಸವಾಲುಗಳ ಮಧ್ಯೆ ಜನರಿಗೆ ಉತ್ತಮವಾದ ಸೇವೆಯನ್ನು ನೀಡುತ್ತ ಬಂದಿರುವ ಕೊಡಗಿನ ಸಹಕಾರಿ ಸಂಘಗಳು ಕಾರ್ಯವೈಖರಿ ಶ್ಲಾಘನೀಯ. ಸಹಕಾರಿ ಸಂಘಗಳು ಜನರಿಗೆ ಕಷ್ಟ ಕಾಲದಲ್ಲಿ ಉತ್ತಮವಾದ ಸೇವೆಯನ್ನು ನೀಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಕೊಡಗು ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಹೇಳಿದರು.

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾಭವನ ಮತ್ತು ಕಚೇರಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಕಲ್ಪನ ಸಕಾರಗೊಳ್ಳಲು ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಕೈ ಜೋಡಿಸುವುದರ ಜೊತೆಗೆ ವಿಕಸಿತ ಭಾರತಕ್ಕೆ ಜನರ ಸಹಕಾರ ಮುಖ್ಯವಾಗುತ್ತದೆ. ಇನ್ನೂ ಕೆಲವು ತಿಂಗಳುಗಳಲ್ಲಿ ಮಡಿಕೇರಿಯಲ್ಲಿ ಸಂಸದರ ಕಚೇರಿ ತೆರೆಯಲಿದ್ದು ಕಾಫಿ, ಅಡಿಕೆ ಹಾಗೂ ಕೊಡಗಿನ ಇತರ ಕೃಷಿ ಬೆಳೆಗಳ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳನ್ನು ತಿಳಿಸಲು ಅವಕಾಶವಿರುತ್ತದೆ ಎಂದರು.

ಮೈಸೂರು-ಕುಶಾಲನಗರ ಹೆದ್ದಾರಿ ಹಾಗೂ ರೈಲ್ವೆ ಕಾಮಗಾರಿಗಳು, ಕೊಡಗು ವಿಶ್ವವಿದ್ಯಾನಿಲಯದ ಕೆಲಸಗಳು ಮುಂದಿನ ದಿನಗಳಲ್ಲಿ ಆಗುವ ಭರವಸೆ ನೀಡಿದರು. ನಂತರ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಸಂವಾದ ನಡೆಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಮಾತನಾಡಿ, ಹಿರಿಯ ಸಹಕಾರಿಗಳ ದೂರದೃಷ್ಟಿಯ ಚಿಂತನೆಯಿAದ ಇಂದು ಸಹಕಾರಿ ಸಂಘ ಬಲಿಷ್ಠವಾಗಿದೆ. ಗ್ರಾಮಸ್ಥರು ಒಟ್ಟಾಗಿ ಸಹಕಾರಿ ಸಂಘದೊAದಿಗೆ ಕೈ ಜೋಡಿಸಬೇಕು. ಬದ್ಧತೆ ಇರುವ ಆಡಳಿತ ಮಂಡಳಿ ಇದ್ದರೆ ಉತ್ತಮವಾದ ಸಹಕಾರಿ ಸಂಘ ರೂಪುಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಕೊಡಗು ಜಿಲ್ಲಾ ಸಹಕಾರ ಸಂಘದಿAದ ನೀಡುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಸಭೆಗೆ ತಿಳಿಸಿದರು.

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಕ್ಯಾಮ್ಕೋ ಮಂಗಳೂರು ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪಯಸ್ವಿನಿ ಸೊಸೈಟಿಯ ಅಧ್ಯಕ್ಷ ಅನಂತ ಎನ್.ಸಿ, ಮರಗೋಡು ಸೊಸೈಟಿ ಅಧ್ಯಕ್ಷ ಕಾಂಗೀರ ಸತೀಶ್, ಪೆರಾಜೆ ಸೊಸೈಟಿ ಉಪಾಧ್ಯಕ್ಷ ಅಶೋಕ ಪೆರುಮುಂಡ, ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಹೆಚ್.ಕೆ ಉಪಸ್ಥಿತರಿದ್ದರು.