ಸೋಮವಾರಪೇಟೆ, ಸೆ. ೧೦: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೆಲೆ ಕೆಲಸ ಮಾಡುತ್ತಿರುವ ಗ್ರೂಪ್ ಡಿ ನೌಕರರಿಗೆ ಕಳೆದ ೪ ತಿಂಗಳಿನಿAದ ಸಂಬಳ ಪಾವತಿಯಾಗದ ಹಿನ್ನೆಲೆ ಇಂದು ನೌಕರರು ಕೆಲಸ ಸ್ಥಗಿತ ಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೨ ಮಂದಿ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ತಿಂಗಳಿನಿAದ ಸಂಬಳ ನೀಡಿರಲಿಲ್ಲ. ಈ ಹಿಂದೆ ಪ್ರತಿ ತಿಂಗಳು ೧೦ ಅಥವಾ ೧೫ನೇ ತಾರೀಕಿಗೆ ಸಂಬಳವಾಗುತ್ತಿತ್ತು. ಇದೀಗ ವೇತನವಿಲ್ಲದೆ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ, ತಕ್ಷಣ ವೇತನ ಪಾವತಿಸಬೇಕೆಂದು ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಈ ಹಿಂದೆ ಜಿಲ್ಲಾ ಆರೋಗ್ಯಾಧಿ ಕಾರಿಗಳು, ತಾಲೂಕು ಆರೋಗ್ಯಾಧಿ ಕಾರಿಗಳ ಗಮನ ಸೆಳೆಯಲಾಗಿತ್ತು. ಆಸ್ಪತ್ರೆಯ ಕಚೇರಿಗೆ ತೆರಳಿ ಮನವಿ ಮಾಡಲಾಗಿತ್ತು. ಶಾಸಕ ಮಂತರ್ ಗೌಡ ಅವರೊಂದಿಗೆ ಸಮಸ್ಯೆಯ ಬಗ್ಗೆ ತಿಳಿಸಲಾಗಿತ್ತು. ಹೀಗಿದ್ದರೂ ಈವರೆಗೆ ಸಂಬಳ ಪಾವತಿ ಮಾಡಿಲ್ಲ. ಸಂಬಳವಿಲ್ಲದ ಹಿನ್ನೆಲೆ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಆರೋಪಿಸಿ ಇಂದು ಬೆಳಗ್ಗಿನಿಂದಲೇ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್ ಅವರುಗಳು, ಪ್ರತಿಭಟನಾನಿರತರ ಅಹವಾಲು ಆಲಿಸಿದರು. ಮುಂದಿನ ಒಂದು ವಾರದೊಳಗೆ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಗ್ರೂಪ್ ಡಿ. ನೌಕರರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ನೌಕರರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು. ಒಂದು ವಾರದೊಳಗೆ ವೇತನ ಪಾವತಿಯಾಗದಿದ್ದರೆ ಸಂಘಟನೆಯ ವತಿಯಿಂದಲೂ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದರು. ಅಧಿಕಾರಿಗಳ ಭರವಸೆ ಹಿನ್ನೆಲೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನೌಕರರು ನಂತರ ಕರ್ತವ್ಯಕ್ಕೆ ಹಾಜರಾದರು.