ಕುಶಾಲನಗರ, ಅ. ೧: ಕೊಡಗು ಜಿಲ್ಲಾ ಯುವಜನ ಸಂಘದ ಆಶ್ರಯದಲ್ಲಿ ಸ್ನೇಹ, ಸೌಹಾರ್ದತೆ ಹಾಗೂ ಸಹಿಷ್ಣುತೆಯನ್ನು ಸಾರುವ ಬೃಹತ್ ಮಿಲಾದ್ ಮೆರವಣಿಗೆ ಹಾಗೂ ಮೌಲಿದ್ ಮಜ್ಲಿಸ್ ಕುಶಾಲನಗರದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲಾ ಫೈಜಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯು ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕಾರು ನಿಲ್ದಾಣದಲ್ಲಿ ಸಮಾಪ್ತಿ ಗೊಂಡಿತು. ಮೆರವಣಿಗೆಯಲ್ಲಿ ಆಕರ್ಷಕ ಉಡುಗೆಗಳನ್ನು ತೊಟ್ಟ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು. ನಂತರ ಕಾರು ನಿಲ್ದಾಣದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಸಂಘಟನೆಯ ಪದಾಧಿಕಾರಿಗಳು, ಪ್ರಮುಖರಾದ ಉಸ್ಮಾನ್ ಫೈಜಿ ಸೇರಿದಂತೆ ೫೦೦ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.