ಸುಂಟಿಕೊಪ್ಪ, ಅ. ೧: ಎನ್‌ಎಸ್‌ಎಸ್ ಶಿಬಿರವು ವಿದ್ಯಾರ್ಥಿ ಗಳಲ್ಲಿ ಒಗ್ಗಟ್ಟು ಸಂಘಟನೆ ನಾಯಕತ್ವದ ಗುಣಗಳನ್ನು ಹೆಚ್ಚಿಸುವುದರ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಷ್ಟಿçÃಯ ಸೇವಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವದನ್ನು ಶಿಬಿರಾರ್ಥಿಗಳು ಮಾಡಬೇಕೆಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಪೈಪೋಟಿ ಹೆಚ್ಚಾಗಿದ್ದು, ಈ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಕರೆ ನೀಡಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್ ಸುನಿಲ್ ಕುಮಾರ್ ಮಾತನಾಡಿ, ಸಮರ್ಪಣ ಭಾವನೆ ಶಾಲಾಮಟ್ಟದಲ್ಲಿ ಬರಬೇಕಾಗಿದೆ. ಸಮಾಜಕ್ಕೆ ನಾವುಗಳು ಏನನ್ನು ಸಮರ್ಪಣೆ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.
ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ. ಲೋಕೇಶ್ ಕುಮಾರ್ ಮಾತನಾಡಿ ರಾಷ್ಟಿçÃಯ ಸೇವಾ ಯೋಜನೆ ಎಂಬುದು ಸರ್ಕಾರದ ಪ್ರಾಯೋಗಿಕ ಸಾಮಾಜಿಕ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಖಾನ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂದಪ್ಪ ಸಿ.ಜಿ. ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಮ್ಮ ಮಹೇಶ್, ಪಂಚಾಯಿತಿ ಸದಸ್ಯ ಐ.ಸೋಮನಾಥ್, ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಿರಿಲ್ ರಾಡ್ರಿಗಸ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆಯನ್ನು ಹಾಡಿದರು, ಮೋಹನ್ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು, ಉಪನ್ಯಾಸಕಿ ಪ್ರಮೀಳಾ ನಿರೂಪಿಸಿದರು.