ಮಡಿಕೇರಿ, ಅ. ೨: ಪ್ರವಾಸಿಗರನ್ನು ಹೊಟೇಲ್‌ವೊಂದಕ್ಕೆ ತಂಗಲು ಕರೆತಂದಿದ್ದ ಟೂರ್ ಗೈಡ್ ಸೇರಿದಂತೆ ಬಸ್ಸಿನ ಚಾಲಕನ ಮೇಲೆ ಹಲವರು ಥಳಿಸಿದ ಆರೋಪದಡಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ತಾ.೨೯ರ ರಾತ್ರಿ ನಗರದ ರಾಜಾಸೀಟು ರಸ್ತೆಯಲ್ಲಿನ ಹೊಟೇಲ್ ಎದುರು ನಡೆದಿದ್ದು, ಘಟನೆಯು ಅಲ್ಲಿನ ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ. ತಲೆಗೆ ತೀವ್ರ ಗಾಯವಾಗಿರುವುದರಿಂದ ಬಸ್ ಚಾಲಕ ಬೆಂಗಳೂರಿನ ಕೊತ್ತಣೂರು ದಿಣ್ಣೆ ನಿವಾಸಿ ಮಹೇಶ್ ಎಂಬವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಥಳಿಸಿದ ೪ ಮಂದಿಯ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಬೆಂಗಳೂರಿನಿAದ ಪ್ರವಾಸಿಗರು ಮಡಿಕೇರಿಗೆ ರಾತ್ರಿ ಆಗಮಿಸಿದ್ದಾರೆ. ಮಡಿಕೇರಿಯ ರಾಜಾಸೀಟು ರಸ್ತೆಯಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಉಳಿದಿದ್ದು, ಬಸ್ ಚಾಲಕ ಮಹೇಶ್, ಕ್ಲೀನರ್ ಬಸವರಾಜು ಹಾಗೂ ಗೈಡ್ ಸಂತೋಷ್ ಅವರುಗಳು ಬಸ್ಸಿನಲ್ಲೇ ತಂಗಿದ್ದಾರೆ. ರಾತ್ರಿ ಸುಮಾರು ೧೦:೩೦ ಗಂಟೆಗೆ ಈ ಮೂವರು ಹೊಟೇಲ್‌ಗೆ ತೆರಳಿ ಊಟ ಕೇಳಿರುವುದಾಗಿ, ರಾತ್ರಿ ತಡವಾಗಿದ್ದರಿಂದ ಹೊಟೇಲ್‌ನವರು ಊಟ ನಿರಾಕರಿಸಿರುವುದಾಗಿ ಮಹೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದಿದ್ದು, ಹೊಟೇಲ್‌ನ ೪ ಮಂದಿ ಅಡುಗೆ ಸಿಬ್ಬಂದಿ ಸ್ಟೀಲ್ ರಾಡ್, ಅಡುಗೆ ಸೌಟ್ ಬಳಸಿ ಚಾಲಕ ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ್ದು, ಜಗಳ ಬಿಡಿಸಲು ಯತ್ನಿಸಿದ ಸಂತೋಷ್ ಅವರ ಮೇಲೆಯೂ ಹಲ್ಲೆ ನಡೆದಿದೆ ಎಂಬುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಮಹೇಶ್ ಅವರ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲಾಗಿದ್ದಾರೆ.
ಈ ಬಗ್ಗೆ ಜಾಲತಾಣಗಳಲ್ಲಿ ವೀಡಿಯೋ ಹರಿದಾಡುತ್ತಿದ್ದು ಬಸ್ ಚಾಲಕನೇ ಮೊದಲು ಬಸ್‌ನಿಂದ ಮರದ ಬ್ಯಾಟ್‌ವೊಂದನ್ನು ಹಿಡಿದು ತಂದು, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಚಿತ್ರಣ ಕಂಡುಬAದಿದೆ.