ಕುಶಾಲನಗರ, ಅ. ೨ : ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರದಲ್ಲಿ ಆನೆ ಮಾವುತರು ಕಾವಡಿಗರ ರಜಾದಿನ ಬದಲು ಮಾಡಿದ ಹಿನ್ನೆಲೆಯಲ್ಲಿ ಕೆಲವು ಸಮಸ್ಯೆಗಳು ಉಂಟಾಗಿದ್ದು, ರಜಾ ದಿನವನ್ನು ಮಂಗಳವಾರ ಬದಲಾಗಿ ಭಾನುವಾರ ನೀಡುವಂತೆ ಮಾವುತ, ಕಾವಡಿಗರ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ವಿಶ್ವವಿಖ್ಯಾತ ದುಬಾರೆ ಶಿಬಿರದಲ್ಲಿ ೨೪ ಆನೆಗಳಿದ್ದು ಅದರ ನಿರ್ವಹಣೆ ಮಾಡುವ ಸಲುವಾಗಿ ಒಟ್ಟು ೬೦ ಸಿಬ್ಬಂದಿಗಳು ದಿನನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ.
ಭಾನುವಾರ ಕೆಲಸ ಮಾಡಿದ್ದಲ್ಲಿ ತಲಾ ಕೇವಲ ೩೦ ರೂ.ಗಳು ಮಾತ್ರ ಹೆಚ್ಚುವರಿ ವೇತನ ದೊರೆಯುತ್ತವೆ.
ರಜಾ ದಿನದಂದು ಪ್ರವಾಸಿಗರು ಶಿಬಿರಕ್ಕೆ ಬರದಿದ್ದರೂ ಆನೆಗಳ ಸ್ವಚ್ಛತೆ ಸ್ನಾನ ತಿಂಡಿ ತಿನಿಸುವ ಮತ್ತು ಕಾಡಿಗಟ್ಟುವ ಕಾಯಕ ಎಂದಿನAತೆ ಮಾಡಬೇಕಾಗಿದೆ. ದಿನಗೂಲಿ ನೌಕರರಿಗೆ ತಿಂಗಳಿಗೆ ೨೪ ದಿನಗಳು ಮಾತ್ರ ವೇತನ ದೊರೆಯುತ್ತದೆ. ಉಳಿದ ನಾಲ್ಕು ದಿನಗಳ ಕರ್ತವ್ಯಕ್ಕೆ ಯಾವುದೇ ರೀತಿಯ ವೇತನ ಭತ್ಯೆ ಲಭ್ಯವಿರುವುದಿಲ್ಲ ಎಂದು ಅಣ್ಣಯ್ಯ ತಿಳಿಸಿದ್ದಾರೆ. ರಾಜ್ಯದ ಇತರೆಡೆಯ ಶಿಬಿರಗಳ ಸಿಬ್ಬಂದಿಗಳಿಗೆ ನೀಡುವ ವೇತನ ಭತ್ಯೆ ಮತ್ತು ರಜಾ ದಿನಗಳ ಅವಕಾಶ ತಮಗೂ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಿಬಿರದಲ್ಲಿ ಎಲ್ಲಾ ಸಿಬ್ಬಂದಿಗಳು ಒತ್ತಡದಲ್ಲಿ ಕೆಲಸ ಮಾಡುವ ಪ್ರಮೇಯ ಉಂಟಾಗಿದೆ. ಆದಕಾರಣ ಪ್ರತಿ ಭಾನುವಾರ ತಮಗೆ ರಜಾ ದಿನವನ್ನಾಗಿ ಘೋಷಿಸುವಂತೆ ಅಧಿಕಾರಿಗಳ ಬಳಿ ಲಿಖಿತವಾಗಿ ಮನವಿ ಮಾಡಲಾಗುವುದು ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಶಕ್ತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಈ ಬಗ್ಗೆ ಮನವಿ ನೀಡಿದಲ್ಲಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ಆನೆ ಮಾವುತ ಕಾವಾಡಿಗರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಶಿಬಿರದಲ್ಲಿ ಆನೆಗಳ ದಾಳಿಯಿಂದ ಮೂರು ಮಂದಿ ಸಿಬ್ಬಂದಿಗಳು ಮೃತಪಟ್ಟಿದ್ದು ಅಲ್ಲದೆ ಕೆಲವರು ಗಾಯಾಳುಗಳಾಗಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿ ದ್ದಾರೆ. ಅವರುಗಳಿಗೆ ಇಲಾಖೆಯಿಂದ ಅಥವಾ ಸರಕಾರದಿಂದ ಸಿಗಬೇಕಾದ ಪರಿಹಾರ ಇನ್ನೂ ದೊರಕಿಲ್ಲ ಎಂದು ಅವರುಗಳ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದು, ಪ್ರಸಕ್ತ ಬೀದಿ ಪಾಲಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಆನೆ ಶಿಬಿರದ ಮಾವುತ ಕಾವಾಡಿಗರ ಸಮಸ್ಯೆಗಳಿಗೆ ಸಂಬAಧಿಸಿದ ಅಧಿಕಾರಿಗಳು, ಸರ್ಕಾರ ಗಮನಹರಿಸಬೇಕಾಗಿದೆ.
-ಚಂದ್ರಮೋಹನ್