ಸಿದ್ದಾಪುರ, ಅ. ೫: ಅಕ್ರಮವಾಗಿ ವಾಹನದಲ್ಲಿ ಮರಗಳ ನಾಟಗಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ವಾಹನದೊಂದಿಗೆ ಮರಗಳ ನಾಟಗಳನ್ನು ವಶಕ್ಕೆ ಪಡೆಯುವಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ವೀರಾಜಪೇಟೆ ಕಾವೇರಿ ಕಾಲೇಜಿನ ಹಿಂಭಾಗದಲ್ಲಿ ಅಕ್ರಮವಾಗಿ ಸ್ವರಾಜ್ ಮಜ್ದಾ ವಾಹನದಲ್ಲಿ (ಕೆ.ಎ. ೧೨ ಎ. ೫೫೩೩) ಅಕ್ರಮವಾಗಿ ನಂದಿ ಹಾಗೂ ಹಲಸು ಮರಗಳ ನಾಟಗಳನ್ನು ಸಾಗಾಟ ಮಾಡುತ್ತಿರುವ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

ಈ ಸಂದರ್ಭ ಮರ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ೧೫ ನಾಟಗಳು ಪತ್ತೆ ಆಗಿವೆ. ಅಂದಾಜು ಮೌಲ್ಯ ರೂ. ೨ ಲಕ್ಷ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ಮೊದಲ ಪುಟದಿಂದ) ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ. ವಾಹನ ಹಾಗೂ ಮರದ ನಾಟಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ವೀರಾಜಪೇಟೆ ತಾಲೂಕು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್. ಜಗನ್ನಾಥ್ ಮಾತನಾಡಿ, ಈ ರೀತಿಯ ಅಕ್ರಮ ಮರ ಕಡಿದು ಸಾಗಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕೆ.ಟಿ. ಶಿವರಾಂ, ಉಪವಲಯ ಅರಣ್ಯಾಧಿಕಾರಿಗಳಾದ ಕಳ್ಳೀರ ದೇವಯ್ಯ, ಜನಾರ್ಧನ, ಜಿದ್ದಿಮಣಿ, ಆನಂದ, ಚಂದ್ರಶೇಖರ್, ಅರಣ್ಯ ಸಿಬ್ಬಂದಿಗಳಾದ ಅಚ್ಚಯ್ಯ, ಅನಿಲ್, ಲತೇಶ್, ವಿಕಾಸ್, ಹರೀಶ್ ಹಾಗೂ ಆನೆಕಾರ್ಯಪಡೆ ಮತ್ತು ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. - ವಾಸು