ಸೋಮವಾರಪೇಟೆ, ಅ. ೫: ನಾಲ್ಕು ವರ್ಷದ ಬಾಲೆಯೋರ್ವಳು ಆಕಸ್ಮಿಕವಾಗಿ ಹೊಳೆಗೆ ಬಿದ್ದು, ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕೊತ್ತನಳ್ಳಿ ಸಮೀಪದ ಬೆಂಕಳ್ಳಿಯಲ್ಲಿ ನಡೆದಿದೆ. ಬೆಂಕಳ್ಳಿ ನಿವಾಸಿ ಹೆಚ್.ಸಿ. ಜಿತೇಂದ್ರ ಅವರ ಪುತ್ರಿ, ನಾಲ್ಕು ವರ್ಷ ಪ್ರಾಯದ ಅನ್ಯ ಎಂಬಾಕೆಯೇ ದುರಂತಕ್ಕೆ ಬಲಿಯಾದ ಬಾಲೆ. ಶಾಲೆಗೆ ರಜೆ ಇದ್ದುದರಿಂದ ಸಹೋದರ ನೊಂದಿಗೆ ಮನೆಯ ಪಕ್ಕದಲ್ಲಿರುವ ಹೊಳೆ ಬದಿಯಲ್ಲಿ ಆಟ ವಾಡುತ್ತಿದ್ದು, ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದಾಳೆ.
ತಕ್ಷಣ ಸಹೋದರ ಕಿರುಚಿಕೊಂಡಿದ್ದು, ಇದನ್ನು ಕೇಳಿ ಅಜ್ಜ ಚಂಗಪ್ಪ ಅವರು ಸ್ಥಳಕ್ಕಾಗಮಿಸಿ ಅನ್ಯಳನ್ನು ಮೇಲೆತ್ತಿ ಶಾಂತಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.