ಸುಂಟಿಕೊಪ್ಪ, ಅ. ೫: ಸರಕಾರವು ಸಣ್ಣ ಕೃಷಿಕರನ್ನು ಉತ್ತೇಜಿಸುವ ಸಲುವಾಗಿ ಕೃಷಿ ಕಾರ್ಯಕ್ಕೆ ಪೂರಕವಾದ ಬಿತ್ತನೆ ಬೀಜಗಳು, ಕೀಟನಾಶಕ, ಯಂತ್ರೋಪಕರಣ ಹಾಗೂ ಮಣ್ಣಿನ ಪರೀಕ್ಷೆ ಕೃಷಿ ಇಲಾಖೆಯಿಂದ ಕಾಲ ಕಾಲಕ್ಕೆ ನಡೆಸಲಾಗುತ್ತಿದೆ. ಸಣ್ಣ ಕೃಷಿಕರು ಕಚೇರಿಗೆ ದಾಖಲಾತಿಗಳನ್ನು ನೀಡಿದ್ದಲ್ಲಿ ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ಅಧಿಕಾರಿ ಸುಪರ್ಣ ಕೃಷಿಕರಿಗೆ ಮಾಹಿತಿ ನೀಡಿದರು.

ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಕೂರು, ಶಿರಂಗಾಲ, ಕಾನ್‌ಬೈಲ್, ತಲಕಾವೇರಿ ಜ್ಞಾನ ವಿಕಾಸದ ವತಿಯಿಂದ ಮಂಜಿಕೆರೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕೃಷಿಕರಿಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಿಷ್ಟ ೨೦ ಸೆಂಟು ಜಾಗವನ್ನು ಹೊಂದಿಕೊAಡಿರುವ ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಅಂತಹವರು ಕೃಷಿ ಇಲಾಖೆಯಲ್ಲಿ ಆಗಮಿಸಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸರಕಾರದಿಂದ ದೊರೆಯುವ ಸವಲತ್ತುಗಳಿಗೆ ಪಲಾನುಭವಿ ಗಳಾಗಬಹುದೆಂದು ಹೇಳಿದರು. ಇದರಿಂದ ಸಣ್ಣ ಕೃಷಿಕರು ವೈಯಕ್ತಿಕವಾಗಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.

ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಾಲಿನಿ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಹರೀಶ್, ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷೆ ಖತ್ತೀಜ, ಸೇವಾ ಪ್ರತಿನಿಧಿ ಯಶೋಧ, ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.