ಮಡಿಕೇರಿ, ಅ. ೫: ಒಂದೆಡೆ ಮಕ್ಕಳೇ ತಯಾರಿಸಿದ ಮಂಟಪಗಳಲ್ಲಿ ಸುರಾಸುರರ ಅಬ್ಬರ..., ಮತ್ತೊಂದೆಡೆ ಸಂತೆಯಲ್ಲಿ ಮಕ್ಕಳಿಂದ ವಿವಿಧ ಉತ್ಪನ್ನಗಳ ಭರ್ಜರಿ ವ್ಯಾಪಾರ..., ಇನ್ನೊಂದೆಡೆ ಬೆರಗುಗೊಳಿಸಿದ ಮಕ್ಕಳ ಛದ್ಮವೇಷ. ಜಾತಿ - ಧರ್ಮದ ಬೇಧವಿಲ್ಲದೆ ಒಟ್ಟಾಗಿ ಬೆರೆತು ಸಂಭ್ರಮಿಸಿದ ಮಕ್ಕಳು...
ಇಂದು ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ನಗರದ ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆ ಹಾಗೂ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ದಸರಾದಲ್ಲಿ ಕಂಡುಬAದ ಚಿತ್ರಣ. ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಮತ್ತು ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಸರಾ ಕಾರ್ಯಕ್ರಮ ದಸರಾ ಮೆರುಗನ್ನು ಹೆಚ್ಚಿಸುವಲ್ಲಿ ಸಫಲವಾಯಿತು. ವಿವಿಧ ಬಗೆಯ ವಸ್ತುಗಳು, ಉತ್ಪನ್ನಗಳು, ತರಕಾರಿ, ಹಣ್ಣು, ಸೊಪ್ಪು, ಗಿಡಗಳು, ಆಹಾರ ಪದಾರ್ಥಗಳು, ಚಾಟ್ಸ್, ಪಾನಿಪುರಿ, ಚುರುಮುರಿ, ಕೇಕ್, ಜ್ಯೂಸ್ ಸೇರಿದಂತೆ ಇನ್ನಿತರ ಪದಾರ್ಥಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಅಣ್ಣಾ ತಗೋಳಿ, ಅಕ್ಕ ತಗೋಳಿ, ಬನ್ನಿ ಬನ್ನಿ ಎನ್ನುತ್ತಾ ಗ್ರಾಹಕರನ್ನು ಸೆಳೆದು ವ್ಯಾಪಾರ ಮಾಡುವಲ್ಲಿ ಮಕ್ಕಳು ಯಶಸ್ವಿಯಾದರು.
ಮಂಟಪಗಳ ಆಕರ್ಷಣೆ
ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆ ದಶಮಂಟಪಗಳು. ವಿಜಯದಶಮಿಯಂದು ದಶಮಂಟಪಗಳ ಶೋಭಾಯಾತ್ರೆಯನ್ನು ಕಂಡು ಬೆರಗಾಗದವರಾರೂ ಇಲ್ಲ. ಅದೇ ರೀತಿ ಇಂದಿನ ಮಕ್ಕಳ ದಸರಾದಲ್ಲಿ ಕೂಡ ಮಕ್ಕಳ ಮಂಟಪಗಳು ನೋಡುಗರನ್ನು ಆಕರ್ಷಿಸಿದವು. ವಿವಿಧ ದೈವಿಕ ಕಥಾ ಸಾರಾಂಶಗಳನ್ನು ಅಳವಡಿಸಿ ಕಲಾಕೃತಿಗಳ ಚಲನವಲನದೊಂದಿಗೆ ಧ್ವನಿವರ್ಧಕ ಬಳಸಿ ಕಥಾ ಸಾರಾಂಶಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳು ‘ನಾವು ಯಾರಿಗೂ ಕಮ್ಮಿ ಇಲ್ಲ’ ಎಂಬುದನ್ನು ಸಾಬೀತುಪಡಿಸಿದರು. ಬ್ಯಾಟರಿ, ಜನರೇಟರ್‌ಗಳನ್ನು ಹೊತ್ತು ತಂದು ಮಂಟಪಗಳನ್ನು ತಳ್ಳುತ್ತಾ ಗಾಂಧಿಮೈದಾನವನ್ನು ಪ್ರವೇಶಿಸಿದ ಮಕ್ಕಳ ಉತ್ಸಾಹ ನೆರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿತು.
ಕಂಗೊಳಿಸಿದ ಛದ್ಮವೇಷ
ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಮಕ್ಕಳ ಛದ್ಮವೇಷವಂತೂ ನೋಡುಗರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ದೇವಾನುದೇವತೆಗಳು, ಭಾರತಮಾತೆ, ಕಾವೇರಿ ಮಾತೆ, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವಾರು ಮಹನಿಯರ, ಪ್ರಾಣಿ- ಪಕ್ಷಿಗಳ ವೇಷ ಧರಿಸಿದ್ದ ಮಕ್ಕಳು ವೇಷಕ್ಕೆ ಪೂರಕವಾದ ಸಂಭಾಷಣೆಗಳನ್ನು ಪ್ರಸ್ತುತಪಡಿಸಿ ವೀಕ್ಷಕರನ್ನು ರಂಜಿಸಿದರು. ಮಕ್ಕಳ ಕರದಿಂದ ಕ್ಲೇ ಮಾಡಲಿಂಗ್‌ಗಳಲ್ಲಿ ಮಾಡಿದ್ದ
(ಮೊದಲ ಪುಟದಿಂದ) ಮೊಸಳೆ, ದಸರಾ ಅಂಬಾರಿ ಮತ್ತಿತರ ಕಲಾಕೃತಿಗಳು ಕೂಡ ನೋಡುಗರನ್ನು ಸೆಳೆದವು.
‘ಮಕ್ಕಳ ಉತ್ಸಾಹವೇ ನಮಗೆ ಪ್ರೇರಣೆ’
ಮಕ್ಕಳÀ ದಸರಾದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗಿಯಾಗಿದ್ದು, ಮಕ್ಕಳ ಈ ಉತ್ಸಾಹವೇ ನಮಗೆ ಪ್ರೇರಣೆ ಎಂದು ಜಿಲ್ಲಾಧಿಕಾರಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ವೆಂಕಟ್‌ರಾಜಾ ಹೇಳಿದರು. ಮಕ್ಕಳ ದಸರಾವನ್ನು ಛದ್ಮವೇಷ ಧರಿಸಿದ್ದ ಮಕ್ಕಳೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವ್ಯಾಪಾರ ಜ್ಞಾನ ಬೆಳೆಸಲು ಅವರ ಕಲೆಗಳಿಗೆ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ನುಡಿದರು.
ರೋಟರಿಯ ಸಹಾಯಕ ಗವರ್ನರ್ ದೇವಣಿರ ಕಿರಣ್ ಮಾತನಾಡಿ, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಹೇಳಿದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸ್ಫೂರ್ತಿ ತುಂಬಲು ಸಾಧ್ಯ ಎಂದು ಹೇಳಿದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ಮಕ್ಕಳ ದಸರಾದಲ್ಲಿ ಆಯೋಜಿಸಲಾದ ಎಲ್ಲಾ ಕಾರ್ಯಕ್ರಮಗಳಿಗೂ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಗೌರವ ಕಾರ್ಯದರ್ಶಿ ರಮೇಶ್, ಖಜಾಂಚಿ ಅರುಣ್ ಶೆಟ್ಟಿ, ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ, ವಾರ್ತಾಧಿಕಾರಿ ಚಿನ್ನಸ್ವಾಮಿ ಮತ್ತಿತರರಿದ್ದರು.
ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ನಿರೂಪಿಸಿ, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಾಜಿತ್ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಐಜಿ ಬೋರಲಿಂಗಯ್ಯ, ಎಸ್ಪಿ ಕೆ. ರಾಮರಾಜನ್ ಮತ್ತಿತರರು ಮಕ್ಕಳ ಸಂತೆ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಂಟಪ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಅಂಗನವಾಡಿ ಚಿಣ್ಣರು
ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕಿನ ೬ ಅಂಗನವಾಡಿ ಕೇಂದ್ರದ ಒಟ್ಟು ೩೫ ಮಕ್ಕಳು ಪಾಲ್ಗೊಂಡಿದ್ದರು. ಸಂಜೆ ಕಾರ್ಯಕ್ರಮದಲ್ಲಿ ೪೬ ಮಕ್ಕಳು ಸಾಂಸ್ಕೃತಿಕ ಪ್ರದರ್ಶನದಲ್ಲಿ ಸಂಭ್ರಮದಿAದ ತೊಡಗಿಸಿಕೊಂಡು ಗಮನ ಸೆಳೆದರು.
ಮಕ್ಕಳ ದಸರಾ ಅಂಗವಾಗಿ ಮಕ್ಕಳು ಸ್ಥಾಪಿಸಿದ್ದ ತರಕಾರಿ ಮಳಿಗೆ ಇತ್ಯಾದಿ ಅಂಗಡಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿನಿ ತಶ್ಮಿಕಾ ರಚಿಸಿದ್ದ ‘ವಾಟರ್ ಕಲರ್' ಹಾಗೂ 'ಪೆನ್ಸಿಲ್ ಸ್ಕೆಚ್' ಗಳಿಂದ ಆಕರ್ಷಿತಗೊಂಡ ಜಿಲ್ಲಾಧಿಕಾರಿ ಅವರು ಎಲ್ಲಾ ಚಿತ್ರಗಳನ್ನು ರೂ.೩,೦೦೦ ಪಾವತಿಸಿ ಖರೀದಿಸಿದರು.