ಕುಶಾಲನಗರ, ಅ. ೫: ಕುಶಾಲನಗರ-ಕೊಪ್ಪ ಗಡಿ ಭಾಗದ ಕಾವೇರಿ ನದಿ ಸೇತುವೆ ಕೆಳಭಾಗದಲ್ಲಿ ಹರಿಯುವ ನದಿ ಶುಕ್ರವಾರ ಸಂಜೆ ೪ ಗಂಟೆ ವೇಳೆಗೆ ಸಂಪೂರ್ಣ ಪ್ಲಾಸ್ಟಿಕ್ ಬಾಟಲ್ ಮಯವಾಗಿ ಹರಿಯುತ್ತಿದ್ದ ದೃಶ್ಯ ಕಂಡು ಬಂತು.

ನದಿಯ ಸುಮಾರು ೨೦೦ ಮೀಟರ್ ದೂರದ ತನಕ ಸಾವಿರಾರು ಸಂಖ್ಯೆಯ ನೀರಿನ ಖಾಲಿ ಬಾಟಲುಗಳು ನೀರಿನಲ್ಲಿ ತೇಲಿ ಬರುತ್ತಿತ್ತು. ಪ್ರವಾಸಿಗರು ಬಳಸಿದ ನೀರು ಬಾಟಲಿಗಳನ್ನು ಸಮೀಪದ ಕೊಲ್ಲಿಗೆ ಹಾಕಿ ತ್ಯಾಜ್ಯ ವಿಲೇವಾರಿ ಮಾಡಿರುವ ಕೃತ್ಯ ಇದಾಗಿದೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ರೀತಿ ಹರಿಯುವ ನದಿಗೆ ಬಾಟಲಿಗಳನ್ನು ಸುರಿದು ನದಿಯನ್ನು ಕಲುಷಿತಗೊಳಿಸಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

- ಸಿಂಚು