ಮಡಿಕೇರಿ, ಅ. ೬: ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಶನಿವಾರ ರಾತ್ರಿ ಮಕ್ಕಳ ದಸರಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ.ಡಾ. ಮಂತರ್ ಗೌಡ, ಮಡಿಕೇರಿ ದಸರಾಕ್ಕೆ ಹೆಚ್ಚಿನ ಅನುದಾನ ತಂದಿದ್ದು, ನನ್ನ ಸಾಧನೆಯಲ್ಲ. ಶಾಸಕನಾಗಿ ಅದು ತನ್ನ ಕರ್ತವ್ಯ ಮತ್ತು ಹೊಣೆಗಾರಿಕೆ. ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದರಿಂದ ಇವೆಲ್ಲ ಸಾಧ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಸರಾ ಸಮಿತಿಯ ಸಲಹೆಗಾರ ಜಿ. ಚಿದ್ವಿಲಾಸ್, ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪ್ರಯತ್ನದಿಂದ ಈ ಬಾರಿಯ ದಸರಾ ಉತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆತಿದೆ.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇದಿಕೆ ಕಾರ್ಯಕ್ರಮ ಇರುವುದರಿಂದ ಕಲಾವಿದರಿಗೆ ಹಾಗೂ ಕಲಾಭಿಮಾನಿಗಳಿಗೆ ಸಮಸ್ಯೆಯುಂಟಾಗುತ್ತಿದೆ. ಮಕ್ಕಳು ಕೂಡ ರಾತ್ರಿ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮುಂದೆ ಪ್ರತಿದಿನ ವೇದಿಕೆ ಕಾರ್ಯಕ್ರಮಗಳನ್ನು ರದ್ದುಪಡಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭದ ಎರಡು ಸಭಾ ಕಾರ್ಯಕ್ರಮಗಳು ಸಾಕು ಎಂದು ಸಲಹೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ದಸರಾ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಅವಕಾಶ ದೊರೆಯುತ್ತಿದ್ದು, ವಿವಿಧ ಕಾರ್ಯಕ್ರಮಗಳು ಮೂಡಿಬರುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ನಗರಸಭೆ ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯರುಗಳಾದ ಸವಿತಾ ರಾಕೇಶ್, ಮನ್ಸೂರ್ ಆಲಿ, ಅಮೀನ್ ಮೊಹಿಸಿನ್, ಎಸ್.ಸಿ. ಸತೀಶ್, ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್, ದಸರಾ ಸಮಿತಿ ಗೌರವಾಧ್ಯಕ್ಷರುಗಳಾದ ಚುಮ್ಮಿ ದೇವಯ್ಯ, ಮನು ಮಂಜುನಾಥ್, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಂತೋಷ್ ಅಣ್ವೇಕರ್, ಟೌನ್ ಬ್ಯಾಂಕ್ ಅಧ್ಯಕ್ಷ ಸತೀಶ್ ಪೈ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಸುದಯ್ ನಾಣಯ್ಯ, ಪೇಟೆ ಶ್ರೀ ರಾಮಂದಿರ ಮಂಟಪ ಸಮಿತಿ ಅಧ್ಯಕ್ಷ ಚೇತನ್, ಕರವಲೆ ಭಗವತಿ ದೇವಾಲಯ ಸಮಿತಿ ಅಧ್ಯಕ್ಷ ಚಂಗಪ್ಪ, ದಂಡಿನ ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ರಮೇಶ್ ಹಾಜರಿದ್ದರು.